ADVERTISEMENT

ಚಂಡಮಾರುತ ಪರಿಣಾಮ: ಒಡಿಶಾದಲ್ಲಿ ಧಾರಾಕಾರ ಮಳೆ

ಪಿಟಿಐ
Published 26 ಸೆಪ್ಟೆಂಬರ್ 2021, 8:28 IST
Last Updated 26 ಸೆಪ್ಟೆಂಬರ್ 2021, 8:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ಚಂಡಮಾರುತ ‘ಗುಲಾಬ್’ ಪರಿಣಾಮದಿಂದಾಗಿ ಒಡಿಶಾದ ದಕ್ಷಿಣ ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಒಡಿಶಾದ ಗೋಪಾಲಪುರ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂ ನಡುವೆ ಭೂಕುಸಿತ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಸಿದೆ.

ಕಳೆದ ನಾಲ್ಕು ತಿಂಗಳಲ್ಲಿ ಒಡಿಶಾವನ್ನು ಬಾಧಿಸುತ್ತಿರುವ ಎರಡನೇ ಚಂಡಮಾರುತ ಇದು. ಗೋಪಾಲಪುರದ ಪೂರ್ವ ಆಗ್ನೇಯದ 140 ಕಿ.ಮೀ ದೂರ ಮತ್ತು ಕಳಿಂಗಪಟ್ಟಣಂನ ಪೂರ್ಣ ಈಶಾನ್ಯದ 190 ಕಿ.ಮೀ ದೂರದ ಸ್ಥಳವು ಚಂಡಮಾರುತದ ಕೇಂದ್ರವಾಗಿದೆ ಎಂದು ಇಲಾಖೆಯು ತಿಳಿಸಿದೆ.

ಚಂಡಮಾರುತವು ಆಂಧ್ರಪ್ರದೇಶದ ಉತ್ತರ ಮತ್ತು ಒಡಿಶಾ ಕರಾವಳಿಯ ದಕ್ಷಿಣ ಭಾಗದತ್ತ ಚಲಿಸುವ ಸಂಭವವಿದೆ. ಗರಿಷ್ಠ ವೇಗ ಗಂಟೆಗೆ 75–85 ಕಿ.ಮೀ ಇದ್ದು, 95 ಕಿ.ಮೀ.ವರೆಗೂ ವೇಗ ವೃದ್ಧಿಸಬಹುದು. ಭಾನುವಾರ ಸಂಜೆಯ ನಂತರ ಭೂಕುಸಿತ ಬೆಳವಣಿಗೆಗಳು ಕಂಡುಬರಬಹುದು ಎಂದು ಐಎಂಡಿ ತಿಳಿಸಿದೆ. ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ADVERTISEMENT

ಒಡಿಶಾ ಸರ್ಕಾರವು ಈಗಾಗಲೇ ಮುಂಜಾಗ್ರತೆಯಾಗಿ ಆಡಳಿತಯಂತ್ರವನ್ನು ಸಜ್ಜಾಗಿ ಇರಿಸಿದೆ. ಅಪಾಯ ಎದುರಾಗಲಿದೆ ಎಂದು ಗುರುತಿಸಲಾದ ಭಾಗಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮವಹಿಸಿದೆ.

ಒಡಿಶಾದ ಪ್ರಾಕೃತಿಕ ವಿಕೋಪ ಕ್ಷಿಪ್ರ ಕಾರ್ಯಪಡೆಯ 42 ತಂಡಗಳು, ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ 24 ತಂಡಗಳು ಪೂರ್ವಸಿದ್ಧತೆಯೊಂದಿಗೆ ಪರಿಹಾರ ಸೇವೆಗೆ ಸಜ್ಜಾಗಿವೆ. ಕರಾವಳಿ ಭಾಗದ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ.

ಮುಂದಿನ ಮೂರು ದಿನಗಳಲ್ಲಿ ಸಮುದ್ರದ ಸ್ಥಿತಿಯಲ್ಲಿ ಭಾರಿ ಬದಲಾವಣೆ ಕಾಣಲಿದ್ದು, ಅಬ್ಬರ ಹೆಚ್ಚಿರಲಿದೆ. ಸಮುದ್ರಕ್ಕೆ ಇಳಿಯಬಾರದು ಎಂದು ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಮೀನುಗಾರರಿಗೆ ಸಲಹೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.