ಸಾವು (ಪ್ರಾತಿನಿಧಿಕ ಚಿತ್ರ)
ಲಖನೌ: ಉತ್ತರ ಪ್ರದೇಶದಾದ್ಯಂತ ಮಳೆ ಸಂಬಂಧಿತ ಅವಘಡಗಳಲ್ಲಿ 24 ಗಂಟೆಗಳಲ್ಲಿ ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶನಿವಾರ ರಾತ್ರಿ 8 ಗಂಟೆಯಿಂದ ಭಾನುವಾರ ರಾತ್ರಿ 8 ಗಂಟೆಯವರೆಗೆ ಸಿಡಿಲಿನ ಹೊಡೆತ, ನೀರಿನಲ್ಲಿ ಮುಳುಗಿ ಮತ್ತು ಹಾವು ಕಡಿತದಿಂದ ಸಾವಿಗೀಡಾದವರ ಸಂಖ್ಯೆ 14 ಎಂದು ಅದು ಹೇಳಿದೆ.
ಗೋರಖ್‌ಪುರದಲ್ಲಿ ಸಿಡಿಲು ಬಡಿದು ಇಬ್ಬರು ಸಾವಿಗೀಡಾದರೆ, ಜೌನ್‌ಪುರ, ರಾಯ್‌ಬರೇಲಿ, ಚಂದೌಲಿ, ಕುಶಿನಗರ ಮತ್ತು ಕಾನ್ಪುರದ ದೇಹತ್‌ನಲ್ಲಿ ಇದೇ ರೀತಿಯ ಘಟನೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಚಿತ್ರಕೂಟದಲ್ಲಿ ಇಬ್ಬರು ಮತ್ತು ಬಂದಾದಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ, ಘಾಜಿಪುರದಲ್ಲಿ ಇಬ್ಬರು ಮತ್ತು ಚಂದೌಲಿ ಹಾಗೂ ಪ್ರತಾಪ್‌ಗಢದಲ್ಲಿ ತಲಾ ಒಬ್ಬರು ಹಾವು ಕಡಿತದಿಂದ ಅಸುನೀಗಿದ್ದಾರೆ ಎಂದು ಅದು ಹೇಳಿದೆ.
ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.