ADVERTISEMENT

2030ಕ್ಕೆ ಮಳೆ ಪ್ರಮಾಣ ಶೇ 25ರಷ್ಟು ಹೆಚ್ಚಳ

ಹವಾಮಾನ ವೈಪರೀತ್ಯ– ವಿಶ್ವ ಸಂಸ್ಥೆಯ ವರದಿಯಲ್ಲಿದೆ ಭವಿಷ್ಯದ ಆತಂಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 18:48 IST
Last Updated 14 ಆಗಸ್ಟ್ 2021, 18:48 IST
ಪ್ರೊ. ಜಿ. ಬಾಲ, ಪ್ರೊ. ಬಿ.ಕೆ. ಚಂದ್ರಶೇಖರ್‌, ಪ್ರೊ, ಎನ್‌. ಎಚ್‌. ರವೀಂದ್ರನಾಥ್
ಪ್ರೊ. ಜಿ. ಬಾಲ, ಪ್ರೊ. ಬಿ.ಕೆ. ಚಂದ್ರಶೇಖರ್‌, ಪ್ರೊ, ಎನ್‌. ಎಚ್‌. ರವೀಂದ್ರನಾಥ್   

ಬೆಂಗಳೂರು: ‘ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 30 ವರ್ಷಗಳಲ್ಲಿ ರಾಜ್ಯದ ಈಶಾನ್ಯ ಭಾಗದಲ್ಲಿ ಬಹಳ ದೊಡ್ಡ ಹಾನಿ ಉಂಟಾಗಲಿದೆ. ಅಲ್ಲದೆ, ಕಡಿಮೆ ಅವಧಿಯಲ್ಲಿ ಭಾರಿ ಮಳೆ ಸುರಿದು ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಕುಸಿತದಂಥ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌) ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎನ್‌.ಎಚ್‌. ರವೀಂದ್ರನಾಥ್‌ ಮತ್ತು ಪ್ರೊ.ಜಿ. ಬಾಲ ಅಭಿಪ್ರಾಯಪಟ್ಟರು.

‘ಬೆಂಗಳೂರು ಕ್ಲೈಮೇಟ್‌ ಚೇಂಜ್‌ ಇನಿಷಿಯೇಟಿವ್‌– ಕರ್ನಾಟಕ (ಬಿಸಿಸಿಐ–ಕೆ)’ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಈ ಇಬ್ಬರು, ‘ಹವಾ ಮಾನ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪರಿಣಾಮಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಕೈಗೊ ಳ್ಳಬೇಕು’ ಎಂದು ಸಲಹೆ ನೀಡಿದರು.

ಹವಾಮಾನ ವೈಪರೀತ್ಯ ಮತ್ತು ಬದಲಾವಣೆಗೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯ ಐಪಿಸಿಸಿ (ಇಂಟರ್‌ ಗವರ್ನ್‌ಮೆಂಟಲ್‌ ಫ್ಯಾನಲ್‌ ಆನ್‌ ಕ್ಲೈಮೇಟ್‌ ಚೇಂಜ್‌) ತಂಡ ‘ಕ್ಲೈಮೇಟ್‌ ಚೇಂಜ್‌–2020: ದಿ ಫಿಸಿಕಲ್ ಸೈನ್ಸ್‌ ಬೇಸಿಸ್‌’ ವರದಿ ಸಿದ್ಧಪಡಿಸಿ ಸಲ್ಲಿಸಿದೆ. ಐಐಎಸ್‌ನ ಈ ಇಬ್ಬರು ಪ್ರಾಧ್ಯಾಪಕರು ತಂಡದಲ್ಲಿ ಇದ್ದರು.

ADVERTISEMENT

ವಿಶ್ವದಾದ್ಯಂತ ಇತ್ತೀಚೆಗೆ ಭೀಕರ ಪ್ರವಾಹ, ಉಷ್ಣ ಹವೆ, ಕಾಡ್ಗಿಚ್ಚು ಸೇರಿದಂತೆ ನಾನಾ ಬಗೆಯ ಪ್ರಕೃತಿ ವಿಕೋಪಗಳು ಹೆಚ್ಚುತ್ತಿದೆ. ಈ ವಿಕೋ ಪಗಳಿಗೆ ಕಾರಣವಾಗಿರುವ ಜಾಗತಿಕ ತಾಪಮಾನ ಹೆಚ್ಚಳವನ್ನು ಹತೋಟಿಗೆ ತರುವ ಸಂಬಂಧ ಈ ವರದಿಯನ್ನು 159 ದೇಶಗಳು ಒಪ್ಪಿಕೊಂಡಿವೆ.

‘ಹವಾಮಾನ ವೈಪರೀತ್ಯದಿಂದ ಕರ್ನಾಟಕಕ್ಕೆ ಹೆಚ್ಚಿನ ಹಾನಿ ಉಂಟಾಗಲಿದೆ. 2050ರ ವೇಳೆಗೆ ಪಶ್ಚಿಮಘಟ್ಟದಲ್ಲಿ ಶೇ 33ರಷ್ಟು ಜೀವವೈವಿಧ್ಯ ವಿನಾಶದ ಅಂಚಿಗೆ ಹೋಗಲಿದೆ. ಹೀಗೆ ನಾಶವಾದರೆ, ಅದಕ್ಕೆ ಪರ್ಯಾಯ ಇಲ್ಲ. 2030ರ ಮಧ್ಯಂತರದ ವೇಳೆಗೆ ರಾಜ್ಯದ ನಾನಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೀಳುವ ಮಳೆಯ ಪ್ರಮಾಣ ಶೇ 10ರಿಂದ ಶೇ 25ರಷ್ಟು ಹೆಚ್ಚಾಗಲಿದೆ. ಈ ರೀತಿ ಬೀಳುವ ಅಕಾಲಿಕ ಮಳೆಯಿಂದ ರಾಜ್ಯ ಏಕಕಾಲದಲ್ಲಿ ಪ್ರವಾಹ ಮತ್ತು ಬರಗಾಲಕ್ಕೆ ತುತ್ತಾಗಲಿದೆ. ಮನ್ಸೂನ್‌ ಮಳೆಯು ಕೆಲವು ಭಾಗಗಳಲ್ಲಿ ಅತಿಯಾಗಿ ಬೀಳುವುದು ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆ ಎದುರಾಗಲಿದೆ’ ಎಂದು ರವೀಂದ್ರನಾಥ್‌ ಅವರು ಅಭಿಪ್ರಾಯಪಟ್ಟರು.

‘ಪ್ರಕೃತಿಯ ಮೇಲೆ ಮನುಷ್ಯ ನಡೆಸಿದ ಕೃತ್ಯಗಳಿಂದಾಗಿ ಮುಂದಿನ 20 ವರ್ಷಗಳಲ್ಲಿ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ ಏರಿಕೆ ಆಗಲಿದೆ. ಇದರಿಂದ ಉಷ್ಣ ಹವೆ, ಪ್ರವಾಹ, ಹಿಮನದಿಗಳು ಕುಗ್ಗುವಿಕೆ, ನೀರ್ಗಲ್ಲುಗಳು ಮತ್ತು ಹಿಮ ಪರ್ವತಗಳ ಕರಗುವಿಕೆ ಹೆಚ್ಚಳಗೊಂಡು, ಸಮುದ್ರದ ಮಟ್ಟದಲ್ಲಿ ಏರಿಕೆ ಆಗಲಿದೆ’ ಎಂದರು.

‘ಪರಿಸರದಲ್ಲಿ ಇಂಗಾಲದ (ಸಿಒ–2) ಹೊರಸೂಸುವಿಕೆಯ ಪ್ರಮಾಣ ತಗ್ಗಿಸು ವುದು, ಹವಾಮಾನ ವೈಪರೀತ್ಯಗಳನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಈಗಾಗಲೇ ಭೂಮಿಯ ಉಷ್ಣಾಂಶ 1.2 ಡಿಗ್ರಿ ಸೆಲ್ಸಿಯಸ್‌ ಮೀರಿದೆ. ಮುಂದಿನ 20ರಿಂದ 30 ವರ್ಷಗಳಲ್ಲಿ ಪರಿಸರಕ್ಕೆ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಸಂಪೂರ್ಣವಾಗಿ ತಗ್ಗಿಸುವ ಮೂಲಕ ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ ಮೀರದಂತೆ ತಡೆಯುವುದು ದೊಡ್ಡ ಸವಾಲಾಗಿದೆ’ ಎಂದು ಜಿ. ಬಾಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.