ಸಿಕಾರ್ : 'ಜೈ ಶ್ರೀರಾಮ್', 'ಮೋದಿ ಜಿಂದಾಬಾದ್' ಎಂದು ಘೋಷಣೆ ಕೂಗಲು ನಿರಾಕರಿಸಿದ 52ರ ಹರೆಯದ ಆಟೋ ಚಾಲಕರೊಬ್ಬರ ಮೇಲೆ ಶುಕ್ರವಾರ ರಾಜಸ್ಥಾನದ ಸಿಕರ್ ನಗರದಲ್ಲಿ ಹಲ್ಲೆನಡೆದಿದೆ.
ಗಫರ್ ಅಹಮದ್ ಕಚ್ಚವಾ ಎಂಬ ವ್ಯಕ್ತಿಯ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಘೋಷಣೆ ಕೂಗಲು ನಿರಾಕರಿಸಿದಾಗ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ ಕೈಯಲ್ಲಿದ್ದ ಹಣ ಮತ್ತು ವಾಚ್ ಕದ್ದುಕೊಂಡು ಹೋಗಿದ್ದಾರೆ ಎಂದು ಗಫರ್ ದೂರು ನೀಡಿದ್ದಾರೆ. ಗಫರ್ ಅವರ ಹಲ್ಲು ಮುರಿದಿದೆ, ಕಣ್ಣು ಊದಿಕೊಂಡಿದ್ದು ಮುಖದ ಮೇಲೆ ಗಾಯಗಳಾಗಿವೆ.
ಎಫ್‌ಐಆರ್ ಪ್ರಕಾರ ಶುಕ್ರವಾರ ಮುಂಜಾನೆ 4 ಗಂಟೆಗೆ ಗಫರ್ ಪ್ರಯಾಣಿಕರೊಬ್ಬರನ್ನು ಗಮ್ಯ ತಲುಪಿಸಿ ತನ್ನ ಮನೆಗೆ ಮರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರು ನಿಲ್ಲಿಸಿ ತಂಬಾಕು ಇದೆಯಾ ಎಂದು ಕೇಳಿದ್ದರು.
ತಂಬಾಕು ಕೊಟ್ಟಾಗ ಬೇಡ ಎಂದು ಹೇಳಿದ ಅವರು 'ಮೋದಿ ಜಿಂದಾಬಾದ್', 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘೋಷಣೆ ಕೂಗಲು ಗಫರ್ ನಿರಾಕರಿಸಿದಾಗ ಬಡಿಗೆಯಿಂದ ಹೊಡೆದಿದ್ದಾರೆ.
ದೂರು ದಾಖಲಾದ ನಂತರ ಶುಕ್ರವಾರವೇ ನಾವು ಇಬ್ಬರನ್ನು ಬಂಧಿಸಿದ್ದೇವೆ. ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿಗಳು ಮದ್ಯದ ಅಮಲಿನಲ್ಲಿ ಈ ಕೃತ್ಯವೆಸಗಿದ್ದಾರೆ ಎಂದು ಸಿಕರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ.
ಆರೋಪಿಗಳನ್ನು ಶಂಭು ದಯಾಳ್ ಜಾಟ್ (35 ), ರಾಜೇಂದ್ರ ಜಾಟ್ (30) ಎಂದು ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.