ADVERTISEMENT

ರಾಜಸ್ಥಾನ| ಕಾಂಗ್ರೆಸ್‌ ವಿರುದ್ಧ ಮತ ಹಾಕಲು ಬಿಎಸ್‌ಪಿ ಶಾಸಕರಿಗೆ ವಿಪ್‌ ಜಾರಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 2:30 IST
Last Updated 27 ಜುಲೈ 2020, 2:30 IST
   

ಜೈಪುರ: ರಾಜಸ್ಥಾನ ರಾಜಕಾರಣಕ್ಕೆ ಭಾನುವಾರ ರಾತ್ರಿ ಹೊಸ ತಿರುವು ಸಿಕ್ಕಿದೆ. ಒಂದು ವೇಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಸೃಷ್ಟಿಯಾದರೆ, ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ತನ್ನ ಆರು ಶಾಸಕರಿಗೆ ವಿಪ್‌ ಜಾರಿ ಮಾಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ, ‘ಎಲ್ಲಾ ಆರು ಶಾಸಕರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲಾಗಿದೆ.

‘ಬಿಎಸ್ಪಿ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷ. ಹಾಗಾಗಿ ಸಂವಿಧಾನದ 10ನೇ ಪರಿಚ್ಛೇದದ ನಾಲ್ಕನೇ ಖಂಡಿಕೆಯಲ್ಲಿ ಉಲ್ಲೇಖಸಿರುವಂತೆ ರಾಜ್ಯಮಟ್ಟದಲ್ಲಿ ಯಾವುದೇ ವಿಲೀನ ಪ್ರಕ್ರಿಯೆ ಸಾಧ್ಯವಿಲ್ಲ. ರಾಷ್ಟ್ರದ ಎಲ್ಲ ಕಡೆ ವಿಲೀನವಾಗದೇ, ಈ ಆರು ಜನ ಶಾಸಕರು ಬೇರೆ ಪಕ್ಷಗಳೊಂದಿಗೆ ವಿಲೀನಗೊಳ್ಳಲು ಸಾಧ್ಯವಿಲ್ಲ,’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಒಂದು ವೇಳೆ ಈ ಆರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದರೆ, ಅವರು ವಿಧಾನಸಭೆಯಿಂದ ಅನರ್ಹರಾಗಲು ಹೊಣೆಗಾರರಾಗಿರುತ್ತಾರೆ ಎಂದು ಮಿಶ್ರಾ ತಿಳಿಸಿದರು.
ಇದಿಷ್ಟೇ ಅಲ್ಲದೆ, ರಾಜಸ್ಥಾನದಲ್ಲಿ ವಿಚಾರಣೆ ಹಂತದಲ್ಲಿರುವ ಶಾಸಕರ ಅನರ್ಹತೆ ಪ್ರಕರಣದಲ್ಲಿ ಬಿಎಸ್‌ಪಿಯು ಮಧ್ಯಪ್ರವೇಶ ಮಾಡುವುದಾಗಿ ತಿಳಿಸಿದೆ. ಇಲ್ಲವೇ, ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದಾಗಿಯೂ ಬಿಎಸ್‌ಪಿ ಹೇಳಿದೆ.

ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್‌ಚಂದ್‌ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಎಂಬ ಆರು ಮಂದಿ ಶಾಸಕರಿಗೆ ಸದ್ಯ ಬಿಎಸ್‌ಪಿ ವಿಪ್‌ ಜಾರಿ ಮಾಡಿದೆ. 2018ರಲ್ಲಿ ನಡೆದಿದ್ದ ರಾಜಸ್ಥಾನ ವಿಧಾನಸಭೆ ಚುನಾಣೆಯಲ್ಲಿ ಇವರೆಲ್ಲರೂ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದರು.

ಆದರೆ, ಆರೂ ಜನರೂ ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿ ಕಳೆದ ವರ್ಷ ಸೆಪ್ಟೆಂಬರ್‌ 16ರಂದು ಸ್ಪೀಕರ್‌ಗೆ ವಿಲೀನ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳ ನಂತರ ಆದೇಶ ಹೊರಡಿಸಿದ್ದ ಸ್ಪೀಕರ್‌ ಆರು ಮಂದಿಯೂ ಇನ್ನು ಮುಂದೆ ಕಾಂಗ್ರೆಸ್‌ನ ಶಾಸಕರು ಎಂದು ಘೋಷಿಸಿದ್ದರು. ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 107ಕ್ಕೆ ಏರಿತ್ತು. ಆರೂ ಶಾಸಕರೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‌ನೊಂದಿಗಿನ ಬಿಎಸ್‌ಪಿಯ ವಿಲೀನವನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿಯ ಶಾಸಕರೊಬ್ಬರು ಕಳೆದ ಶುಕ್ರವಾರ ರಾಜಸ್ಥಾನ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹಿಸಿದ್ದ ಮಾಯಾವತಿ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ್ದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, 'ರಾಜಸ್ಥಾನ ಮುಖ್ಯಮಂತ್ರಿ ಕಾನೂನು ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಮೊದಲು ಅವರು ಬಹುಜನ ಸಮಾಜವಾದಿ ಪಕ್ಷದ ಶಾಸಕರನ್ನು ಕಾಂಗ್ರೆಸ್‌ಗೆ ಸೇರುವಂತೆ ಮಾಡಿದ್ದರು. ಈಗ ಮತ್ತೆ ಅಕ್ರಮವಾಗಿ ಫೋನ್ ಕರೆಗಳನ್ನು ಕದ್ದಾಲಿಸುವ ಮೂಲಕ ಅವರು ಕಾನೂನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಬೇಕು. ರಾಜಸ್ಥಾನದಲ್ಲಿ ಮುಂದುವರೆದಿರುವ ರಾಜಕೀಯ ಗೊಂದಲ ಮತ್ತು ಅಸ್ಥಿರತೆಗಳ ಬಗ್ಗೆ ರಾಜ್ಯಪಾಲರು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಆ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಶಿಫಾರಸು ಮಾಡಿ, ಪ್ರಜಾಪ್ರಭುತ್ವ ಉಳಿಸಬೇಕು' ಎಂದಿದ್ದರು.

ಟ್ವಿಟರ್‌ನಲ್ಲಿ ಟ್ರೆಂಡ್‌

ಬಿಎಸ್‌ಪಿ ತನ್ನ 6 ಶಾಸಕರಿಗೆ ನೋಟಿಸ್‌ ನೀಡಿರುವುದು ಸಾಮಾಜಿಕ ತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ರಾಜಸ್ಥಾನ ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಿದೆ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾಯಾವತಿ ಅವರೂ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದಾರೆ. ರಾಜಕೀಯದಲ್ಲಿ ಅಪ್ರಸ್ತುತ ಎನಿಸಿಕೊಳ್ಳುತ್ತಿರುವಾಗಲೇ ಮಾಯಾವತಿ ಅವರು ಮುನ್ನೆಲೆಗೆ ಬಂದಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಏನು ಮಾಡಬಹುದೋ ಅದರಷ್ಟೇ ಮಾಡಲು ಈಗ ಮಾಯಾವತಿ ಅವರೂ ಶಕ್ತರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ವಿಪ್‌ ನೀಡದ ನಡೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್‌ ಬೆಂಬಲಕ್ಕೆ ನಿಲ್ಲಬೇಕು ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.