ADVERTISEMENT

Rajasthan Elections | ಕರಣ್‌ಪುರ ಕ್ಷೇತ್ರದಲ್ಲಿ ಚುನಾವಣೆ: ಶೇ 70ರಷ್ಟು ಮತದಾನ

ಗೆಲ್ಲುವ ಮೊದಲೇ ಸಚಿವರಾದ ಅಭ್ಯರ್ಥಿ ಸುರೇಂದ್ರ ಪಾಲ್ ಸಿಂಗ್‌

ಪಿಟಿಐ
Published 5 ಜನವರಿ 2024, 10:50 IST
Last Updated 5 ಜನವರಿ 2024, 10:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜೈಪುರ: ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದಾಗಿ ಮುಂದೂಡಲಾಗಿದ್ದ ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆ ವೇಳೆಗೆ ಶೇ 70ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಆಗಿನ ಶಾಸಕ ಗುರ್‌ಮೀತ್ ಸಿಂಗ್ ಕೂನರ್ ಅವರ ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಈ ಕುರಿತು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತ್ತು. ಈ ನಿರ್ದಿಷ್ಟ ಕ್ಷೇತ್ರಕ್ಕೆ ಜ. 5ರಂದು ಮತದಾನ ನಿಗದಿಪಡಿಸಿದ್ದ ಚುನಾವಣಾ ಆಯೋಗವು, ಜ. 8ರಂದು ಮತ ಎಣಿಕೆಗೆ ದಿನಾಂಕ ಘೋಷಿಸಿತ್ತು.

ADVERTISEMENT

ಕೂನರ್ ಅವರ ಪುತ್ರ ರೂಪಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಸುರೇಂದ್ರ ಪಾಲ್ ಸಿಂಗ್ ಸ್ಪರ್ಧಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಸುರೇಂದ್ರ ಪಾಲ್ ಸಿಂಗ್ ಅವರು ಈಗಾಗಲೇ ರಾಜಸ್ಥಾನದ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಗೆಲ್ಲುವ ಮೊದಲೇ ಬಿಜೆಪಿ ಅಭ್ಯರ್ಥಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕಾಂಗ್ರೆಸ್ ಟೀಕಿಸಿದೆ.

‘ತೀವ್ರ ಚಳಿ, ಮಂಜಿನ ನಡುವೆಯೂ ಮತದಾರರು ಮತದಾನ ಮಾಡಲು ಆಗಮಿಸುತ್ತಿದ್ದಾರೆ. ‌‌ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ. ಮಧ್ಯಾಹ್ನ 1.30ರವರೆಗೆ ಶೇ 40.45ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆ ವೇಳೆಗೆ ಶೇ 70ರಷ್ಟು ಮತದಾನವಾಗಿದೆ' ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕರಣ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ 2,40,826 ಮತದಾರರಿದ್ದಾರೆ. ಇದರಲ್ಲಿ 1,25,850 ಪುರುಷರು, 1,14,966 ಮಹಿಳೆಯರು ಹಾಗೂ 10 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಸ್ಥಾನಗಳ ಪೈಕಿ ಉಳಿದ 199 ಸ್ಥಾನಗಳಿಗೆ ನವೆಂಬರ್ 25ರಂದು ಮತದಾನ ನಡೆದಿತ್ತು. 115 ಸ್ಥಾನಗಳಲ್ಲಿ ಜಯ ಗಳಿಸಿದ್ದ ಬಿಜೆಪಿ ಅಧಿಕಾರ ಪಡೆದಿತ್ತು. ಮತ್ತೊಂದೆಡೆ 69 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ಗೆ ಅಧಿಕಾರ ನಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.