ಶಾಲಾ ಕಟ್ಟಡ ಕುಸಿತ
(ಪಿಟಿಐ ಚಿತ್ರ)
ಝಾಲಾವಾಢ (ರಾಜಸ್ಥಾನ): ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾರ್ಥನೆಗೆಂದು ಮಕ್ಕಳು ಸೇರಿದ್ದ ಸಂದರ್ಭದಲ್ಲೇ ಕಟ್ಡಡದ ಒಂದು ಭಾಗ ಕುಸಿದಿದ್ದು, ಮಣ್ಣಿನಡಿಯಲ್ಲಿ ಸಿಲುಕಿ 7 ಮಂದಿ ಮಕ್ಕಳು ಮೃತಪಟ್ಟು, 28 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕೆಲವು ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಪಿಪಲೋದಿ ಸರ್ಕಾರಿ ಶಾಲೆಯ 6 ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಕೊಠಡಿಗಳು ಕುಸಿದು, 35ಕ್ಕೂ ಅಧಿಕ ಮಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡರು. ಕ್ರಾಂಕ್ರೀಟ್ ಸ್ಲ್ಯಾಬ್‌ಗಳು, ಇಟ್ಟಿಗೆ, ಕಲ್ಲುಗಳನ್ನು ಸ್ಥಳೀಯರು, ಪೋಷಕರು ಹಾಗೂ ಶಿಕ್ಷಕರು ತೆರವುಗೊಳಿಸಿ, ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯಲು ಅವಿರತ ಶ್ರಮಿಸಿದರು.
‘ಗ್ರಾಮದಲ್ಲಿ ಶಾಲಾ ಕಟ್ಟಡ ಕುಸಿದ ವಿಚಾರವನ್ನು ಪಿಪಲೋದಿ ಗ್ರಾಮಸ್ಥರು ಬೆಳಿಗ್ಗೆ 7.45ಕ್ಕೆ ಗಮನಕ್ಕೆ ತಂದರು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಏಳು ಮಕ್ಕಳು ಮೃತಪಟ್ಟಿದ್ದಾರೆ’ ಎಂದು ಝಾಲಾವಾಢ ಜಿಲ್ಲೆಯ ಮನೋಹರ್ ಥಾನಾ ಠಾಣೆಯ ಠಾಣಾಧಿಕಾರಿ ನಂದ ಕಿಶೋರ್ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳವು ಜಿಲ್ಲಾ ಕೇಂದ್ರದಿಂದ 80 ಕಿ.ಮೀ. ದೂರದಲ್ಲಿದೆ.
‘ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಶಿಕ್ಷಕರನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ’ ಎಂದು ಶಿಕ್ಷಣ ಸಚಿವ ಮದನ್ ದಿಲ್ವಾರ್ ತಿಳಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
‘ಶಾಲೆಯ ದುಃಸ್ಥಿತಿ ಕುರಿತಂತೆ ಈ ಹಿಂದೆಯೇ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ‘ಆಡಳಿತ ನಡೆಸುವವರ ವೈಫಲ್ಯದಿಂದಲೇ ಈ ಅನಾಹುತ ಸಂಭವಿಸಿದೆ’ ಎಂದು ಸ್ಥಳೀಯ ನಿವಾಸಿ ಬಾಲ್‌ಕಿಶನ್ ಆಕ್ರೋಶ ಹೊರಹಾಕಿದರು. ‘ಶಾಲೆಯ ಹತ್ತಿರದಲ್ಲಿರುವ ರಸ್ತೆಯ ಪಕ್ಕದಲ್ಲಿಯೇ ಕೂತಿದ್ದೆ. ಈ ವೇಳೆ ದೊಡ್ಡದಾದ ಶಬ್ದ ಕೇಳಿಸಿತು. ತಕ್ಷಣವೇ ಅತ್ತ ನೋಡಿದೆ. ಶಾಲೆಯ ಕಟ್ಟಡವೊಂದರ ಭಾಗವು ಉರುಳಿಬಿದ್ದಿರುವುದು ಕಂಡುಬಂತು. ದೂಳು ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳು ಕಿರುಚಾಡುವುದು ಕೇಳಿಸಿತು. ನಾನು ಸೇರಿದಂತೆ ಎಲ್ಲರೂ ಓಡಿಹೋಗಿ ಅವಶೇಷಗಳನ್ನು ತೆಗೆದುಹಾಕಲು ಆರಂಭಿಸಿದೆವು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಅವರು ತಿಳಿಸಿದರು. ‘ಕಟ್ಟಡಕ್ಕೆ ಅಂಟಿಕೊಂಡಂತೆ ಮರದ ಕೊಂಬೆ ಬೆಳೆದಿದ್ದು ಅದರಿಂದಲೇ ನೀರು ಸೋರಿ ಕಟ್ಟಡವು ಶಿಥಿಲಗೊಂಡಿತ್ತು. ಇದರಿಂದಲೇ ಕಟ್ಟಡ ಕುಸಿದಿದೆ’ ಎಂದು ಗಾಯಾಳು ವಿದ್ಯಾರ್ಥಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.