
ಎಸ್ಐಆರ್‌ನ ಅತಿಯಾದ ಕೆಲಸದ ಹೊರೆಯಿಂದ ತಮಗೆ ಮುಕ್ತಿ ನೀಡುವಂತೆ ಕೋಲ್ಕತ್ತದಲ್ಲಿ ಬಿಎಲ್‌ಒಗಳು ಸೋಮವಾರ ಪ್ರತಿಭಟನೆ ನಡೆಸಿದರು
(ಪಿಟಿಐ ಚಿತ್ರ)
ಜೈಪುರ/ನವದೆಹಲಿ: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕೆಲಸದಲ್ಲಿ ತೊಡಗಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಹಶೀಲ್ದಾರ್ ಅವರಿಂದ ದೂರವಾಣಿ ಕರೆ ಬಂದ ನಂತರ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಈ ತಿಂಗಳಲ್ಲಿ ಇಲ್ಲಿಯವರೆಗೆ ದೇಶಾದ್ಯಂತ ಕನಿಷ್ಠ ನಾಲ್ವರು ಬಿಎಲ್‌ಒಗಳು ಆತ್ಮಹತ್ಯೆ ಅಥವಾ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ರಾಜಸ್ಥಾನದ ಸೇವ್ತಿ ಖುರ್ದ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಹರಿರಾಮ್ ಅಲಿಯಾಸ್ ಹರಿಓಂ ಬೈರ್ವಾ (34) ಮೃತ ಶಿಕ್ಷಕ. ತಹಶೀಲ್ದಾರ್ ಅವರಿಂದ ದೂರವಾಣಿ ಕರೆ ಬಂದ ನಂತರ ಅವರು ಹಠಾತನೆ ಕುಸಿದು ಬಿದ್ದರು ಎಂದು ಕುಟುಂಬಿಕರು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿನ ವೈದ್ಯರು ಶಿಕ್ಷಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಅಧಿಕಾರಿಗಳು ಅವರ ಮೇಲೆ ಎಸ್‌ಐಆರ್ ಕರ್ತವ್ಯಗಳ ಬಗ್ಗೆ ಅತಿಯಾದ ಒತ್ತಡ ಹೇರಿದ್ದರು ಎಂದು ಹರಿರಾಮ್ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ತಹಶೀಲ್ದಾರ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಉನ್ನತ ಅಧಿಕಾರಿಗಳಿಂದ ಬಂದ ಸೂಚನೆಯನ್ನು ಮಾತ್ರ ಅವರಿಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಖಾಂದಾರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.