- ಐಸ್ಟಾಕ್ ಚಿತ್ರ
ನವದೆಹಲಿ (ಪಿಟಿಐ): ‘ಎಸ್‌ಐಆರ್ ಮೂಲಕ ರಾಜಸ್ಥಾನದಲ್ಲಿ ವಿರೋಧ ಪಕ್ಷಗಳ ಮತದಾರರನ್ನು ಪಟ್ಟಿಯಿಂದ ದೊಡ್ಡ ಮಟ್ಟದಲ್ಲಿ ಅಳಿಸಿ ಹಾಕಲು ಬಿಜೆಪಿ ಯತ್ನಿಸುತ್ತಿದೆ. ಮೃತಪಟ್ಟಿದ್ದಾರೆ, ಮನೆಯಲ್ಲಿ ಇರಲಿಲ್ಲ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿ 45 ಲಕ್ಷ ಜನರ ಹೆಸರುಗಳನ್ನು ತೆಗೆದು ಹಾಕಲಾಗಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘2025ರ ಡಿ.17ರಿಂದ 2026ರ ಜ.14ವರೆಗೆ, ಬಿಜೆಪಿಯು ತನ್ನ 937 ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮತದಾರರ ಪಟ್ಟಿಗೆ 211 ಹೆಸರು ಸೇರಿಸಲು ಮತ್ತು 5,694 ಜನರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸಿದೆ’ ಎಂದು ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ಡೋಟಾಸರ ದೂರಿದರು.
‘ಇದೇ ವೇಳೆ ಕಾಂಗ್ರೆಸ್ ನಮ್ಮ 110 ಬೂತ್ ಮಟ್ಟದ ಅಧಿಕಾರಿಗಳ ಮೂಲಕ 185 ಜನರ ಹೆಸರನ್ನು ಪಟ್ಟಿಗೆ ಸೇರಿಸಲು ಮತ್ತು ಇಬ್ಬರನ್ನು ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸಿತ್ತು. ಈ ಎಲ್ಲ ಮಾಹಿತಿಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದಲೇ ಪಡೆದುಕೊಂಡಿದ್ದೇವೆ’ ಎಂದರು.
‘ಜ.3ರವರೆಗೆ ಎಸ್‌ಐಆರ್ ಪ್ರಕ್ರಿಯೆಯು ಸುಸೂತ್ರವಾಗಿಯೇ ಇತ್ತು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ರಾಜ್ಯಕ್ಕೆ ಭೇಟಿ ನೀಡಿ, ಸಭೆಗಳನ್ನು ನಡೆಸಿದರು. ಈ ಬಳಿಕ, ಅಕ್ರಮವಾಗಿ ಪಟ್ಟಿಯಿಂದ ಸೇರಿಸುವುದು, ಪಟ್ಟಿಯಿಂದ ಅಳಿಸುವುದು ಆರಂಭವಾಯಿತು’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.