ADVERTISEMENT

ಚುನಾವಣೆಯಲ್ಲಿ ಸೋತರೆ ಕೆಲಸಕ್ಕೆ ಮರಳಿ: ಸರ್ಕಾರಿ ವೈದ್ಯರ ಸ್ಪರ್ಧೆಗೆ HC ಅಸ್ತು

ಪಿಟಿಐ
Published 9 ನವೆಂಬರ್ 2023, 11:11 IST
Last Updated 9 ನವೆಂಬರ್ 2023, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಜೈಪುರ: ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರಿ ವೈದ್ಯರ ಸ್ಪರ್ಧೆಗೆ ಅಸ್ತು ಎಂದಿರುವ ರಾಜಸ್ಥಾನ ಹೈಕೋರ್ಟ್, ಇದೇ 25ರಂದು ನಡೆಯಲಿರುವ ಚುನಾವಣೆಯಲ್ಲಿ ಪರಾಭವಗೊಂಡರೆ ಕೆಲಸಕ್ಕೆ ಮರಳಲು ಸೂಚಿಸಿದೆ.

ಈ ಆದೇಶದಿಂದಾಗಿ ಬಿಟಿಪಿ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಪುತ್ರ ದೀಪಕ್ ಗೋಘ್ರಾ (43) ಎಂಬುವವರು ಬಿಟಿಪಿ ಅಭ್ಯರ್ಥಿಯಾಗಿ ಡುಂಗರ್ಪುರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಇವರನ್ನು ಸೇವೆಯಿಂದ ಬಿಡಗುಡೆ ಮಾಡುವಂತೆ ಹೈಕೋರ್ಟ್‌ನ ಜೋಗ್‌ಪುರ್ ಪೀಠ ಅ. 20ರಂದು ಆದೇಶಿಸಿತ್ತು. 

‘ಮುಂದುವರಿದು, ಒಂದೊಮ್ಮೆ ಸ್ಪರ್ಧಿಯು ಪರಾಭವಗೊಂಡರೆ ಮರಳಿ ವೈದ್ಯಕೀಯ ಕೆಸಲಕ್ಕೆ ಸೇರಲು ಅವಕಾಶ ಕಲ್ಪಿಸುವ ಕುರಿತೂ ನಿರ್ದೇಶಿಸಿತ್ತು.

ADVERTISEMENT

‘ರಾಜಸ್ಥಾನದ ಇತಿಹಾಸದಲ್ಲೇ ಸರ್ಕಾರಿ ವೈದ್ಯರೊಬ್ಬರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಮೊದಲ ಉದಾಹರಣೆ ಇದೇ ಆಗಿದೆ. ಈ ಆದೇಶ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಬಹಳಷ್ಟು ಆಸಕ್ತ ಸರ್ಕಾರಿ ವೈದ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಈ ಆದೇಶ ಅನುವು ಮಾಡಿಕೊಟ್ಟಿದೆ’ ಎಂದು ಗೋಘ್ರಾ ಹೇಳಿದ್ದಾರೆ.

‘ಡುಂಗರ್ಪುರ್‌ನಲ್ಲಿ 10 ವರ್ಷ ವೈದ್ಯನಾಗಿ ಕೆಲಸ ಮಾಡಿದ್ದು, ಸ್ಥಳೀಯ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ’ ಎಂದಿದ್ದಾರೆ.

‘ಜನರ ಸೇವೆಗಾಗಿ ವಿದ್ಯಾವಂತರು ರಾಜಕೀಯ ಪ್ರವೇಶಿಸಬೇಕು. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿರುವುದನ್ನು ಜನರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬರೊಂದಿಗೂ ನಾನು ಹೊಂದಿರುವ ಒಡನಾಟದಿಂದ ಚುನಾವಣೆಯಲ್ಲಿ ನಾನು ಗೆದ್ದೇಗೆಲ್ಲುತ್ತೇನೆ’ ಎಂದು ಘೋಗ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಟಿಪಿ ಅಭ್ಯರ್ಥಿಯಾಗಿರುವ ಗೋಘ್ರಾ ಅವರ ವಿರುದ್ಧ ಬಿಜೆಪಿಯ ಬನ್ಸಿಲಾಲ್‌ ಕಾತರಾ, ಹಾಲಿ ಶಾಸಕ, ಕಾಂಗ್ರೆಸ್‌ನ ಗಣೇಶ ಗೋಘ್ರಾ ಕಣದಲ್ಲಿದ್ದಾರೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಟಿಪಿಯು 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದ 200 ಕ್ಷೇತ್ರಗಳಿಗೆ ನ. 25ರಂದು ಮತದಾನ ನಡೆಯಲಿದೆ. ಡಿ. 3ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.