ADVERTISEMENT

ರಾಜಸ್ಥಾನ: ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 15:31 IST
Last Updated 3 ಸೆಪ್ಟೆಂಬರ್ 2024, 15:31 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಜೈಪುರ: ರಾಜಸ್ಥಾನದ ಬಿಜೆಪಿ ಶಾಸಕರೊಬ್ಬರು ತಮ್ಮದೇ ಸರ್ಕಾರದ  ವಿರುದ್ಧ ವಾಗ್ದಾಳಿ ನಡೆಸಿದ್ದು, ಎಲ್ಲ ಸಚಿವರನ್ನು ‘ಕಳ್ಳರು’ ಎಂದು ಕರೆದಿದ್ದಾರೆ. ಇದರಿಂದ ಭಜನ್‌ಲಾಲ್‌ ಶರ್ಮಾ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿರೋಧ ಪಕ್ಷ ಕಾಂಗ್ರೆಸ್‌ಗೆ ಒಳ್ಳೆಯ ‘ಅಸ್ತ್ರ’ ಸಿಕ್ಕಂತಾಗಿದೆ.

ಲಾಲ್‌ಸೋಟ್‌ ಕ್ಷೇತ್ರದ ಶಾಸಕ ರಾಮ್‌ ವಿಲಾಸ್ ಮೀನಾ ಅವರು ನಗರಾಭಿವೃದ್ಧಿ ಸಚಿವ ಝಾಬರ್‌ ಸಿಂಗ್‌ ಖರ್ರಾ ವಿರುದ್ಧ ಸೋಮವಾರ ಹರಿಹಾಯ್ದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಖಾಲಿಯಿರುವ ಕಿರಿಯ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರದಲ್ಲಿ ಸಚಿವರ ಜತೆ ಮಾತಿನ ಚಕಮಕಿ ನಡೆಸಿದ್ದಾರೆ.

ADVERTISEMENT

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೀನಾ, ಖಾಲಿ ಹುದ್ದೆಗಳ ಭರ್ತಿಗಾಗಿ ಸಚಿವರ ಕಚೇರಿಗೆ ಹಲವು ಬಾರಿ ಹೋದರೂ ಅವರು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು. ‘ಇಂತಹ ಮಂದಿ ನಮ್ಮ ಸರ್ಕಾರದಲ್ಲಿ ಮಂತ್ರಿಗಳಾಗಿ ಕುಳಿತಿದ್ದಾರೆ. ಅವರೆಲ್ಲರೂ ನಿದ್ದೆ ಮಾಡುತ್ತಿದ್ದಾರೆ. ಎಲ್ಲರೂ ಕಳ್ಳರು’ ಎಂದು ಅಸಮಾಧಾನ ಹೊರಹಾಕಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗದಿರುವುದರಿಂದ ಎಲ್ಲ ಶಾಸಕರು ಅತೃಪ್ತರಾಗಿದ್ದಾರೆ ಎಂದಿರುವ ಅವರು, ಈ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡುವ ಬಗ್ಗೆಯೂ ಮಾತನಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಟೀಕಾರಾಂ ಜೂಲಿ, ‘ಬಿಜೆಪಿ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಶಾಸಕರಿಗೇ ಸರ್ಕಾರದ ಜತೆ ಹೊಂದಾಣಿಕೆ ಆಗುತ್ತಿಲ್ಲ ಎಂದಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಾಗಬೇಡ’ ಎಂದು ವ್ಯಂಗ್ಯವಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.