ADVERTISEMENT

ಮಹಾಕುಂಭ ಅಣಕಿಸಿದ ರಾಜೀವ್‌ ಒಡೆತನದ ವಾಹಿನಿ: ಅಸಮಾಧಾನ ಹೊರಹಾಕಿದ ಮಾಜಿ ಸಚಿವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 15:53 IST
Last Updated 4 ಮಾರ್ಚ್ 2025, 15:53 IST
ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌   

ತಿರುವನಂತಪುರ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದಿದ್ದ ಮಹಾಕುಂಭ ಮೇಳದ ವಿರುದ್ಧದ ‘ಕವರ್‌ ಸ್ಟೋರಿ’ಯನ್ನು ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಒಡೆತನದ ‘ಏಷ್ಯಾ ನ್ಯೂಸ್‌’ ವಾಹನಿಯಲ್ಲಿ ಪ್ರಸಾರ ಮಾಡಲಾಗಿದೆ. ಈ ವರದಿ ಪ್ರಸಾರ ಮಾಡಿದ್ದಕ್ಕಾಗಿ ರಾಜೀವ್‌ ಖುದ್ದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಏಷ್ಯಾ ನ್ಯೂಸ್‌’ ವಾಹನಿಯಲ್ಲಿ ‘ಜುಪಿಟರ್‌ ಎಂಟರ್‌ಟೈನ್‌ಮೆಂಟ್‌ ವೆಂಚರ್ಸ್‌’ ಕಂಪನಿಯು ಅಧಿಕ ಷೇರು ಹೊಂದಿದೆ. ರಾಜೀವ್‌ ಚಂದ್ರಶೇಖರ್‌ ಅವರು ಈ ಕಂಪನಿಯ ಮಾಲೀಕರಾಗಿದ್ದಾರೆ.

‘ಕೇರಳದಲ್ಲಿ ಬಿಜೆಪಿಯು ಬೆಳವಣಿಗೆ ಕಾಣುತ್ತಿದೆ. ಯಾಕೆಂದರೆ, ಇತ್ತೀಚೆಗೆ ನಡೆದ ಮಹಾಕುಂಭ ಮೇಳದಲ್ಲಿ ಮಲೆಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೊಂದು ಅತ್ಯುತ್ತಮ ‘ಸಾರ್ವಜನಿಕ ಸಂಪರ್ಕ’ (ಪಿಆರ್‌) ಕಾರ್ಯಕ್ರಮವಾಗಿತ್ತು. ಉತ್ತಮ ವ್ಯಾವಹಾರಿಕಯೂ ಆಗಿತ್ತು. ಜೊತೆಗೆ, ಪ್ರಧಾನಿ ಮೋದಿ ಅವರು ತ್ರಿವೇಣಿ ಸಂಗಮದಲ್ಲಿ ‘ಪವಿತ್ರ ಸ್ನಾನ’ ಕೈಗೊಂಡಿದ್ದ ದೃಶ್ಯಗಳನ್ನು ತೋರಿಸುವ ಮೂಲಕ ಮಹಾಕುಂಭಕ್ಕೆ ಉತ್ತಮ ಪ್ರಚಾರವನ್ನೂ ನೀಡಲಾಯಿತು’ ಎಂಬರ್ಥದಲ್ಲಿ ವರದಿಯನ್ನು ಮಾಡಲಾಗಿತ್ತು.

ADVERTISEMENT

‘ನನಗೆ ಹಲವಾರು ಮಲಯಾಳಿಗಳು ಸಂದೇಶ ಕಳುಹಿಸಿದ್ದಾರೆ. ಮಹಾಕುಂಭವನ್ನು ಗೇಲಿ ಮಾಡಿದ ಈ ಕಾರ್ಯಕ್ರಮದಿಂದ ಅವರಿಗೆ ನೋವಾಗಿದೆ. ಈ ಬಗ್ಗೆ ನಾನು ವಾಹಿನಿಯ ನೇತೃತ್ವ ವಹಿಸಿದವರ ಗಮನಕ್ಕೆ ತಂದಿದ್ದೇನೆ. ಲಕ್ಷಾಂತರ ಭಕ್ತರು ಶ್ರದ್ಧೆಯಿಂದ ತೆರಳಿದ ಕಾರ್ಯಕ್ರಮವೊಂದರ ಬಗ್ಗೆ ಈ ರೀತಿ ಕಾರ್ಯಕ್ರಮವನ್ನು ಮುಂದೆ ಪ್ರಸಾರ ಮಾಡದಂತೆ ಮನವಿ ಮಾಡಿದ್ದೇನೆ’ ಎಂದು ರಾಜೀವ್‌ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿಯೊಬ್ಬ ಹಿಂದೂವಿಗೂ ಅಥವಾ ಯಾವುದೇ ಧರ್ಮದವರಿಗೂ ನಂಬಿಕೆ ಎಂಬುದು ಮುಖ್ಯವಾಗುತ್ತದೆ. ಇದು ಕೇರಳ ಅಥವಾ ದೇಶದ ಯಾವುದೇ ಭಾಗದ ಜನರಿಗೂ ಅನ್ವಯಿಸುತ್ತದೆ. ನಾವು ಇದನ್ನು ಗೌರವಿಸಲೇಬೇಕು
ರಾಜೀವ್‌ ಚಂದ್ರಶೇಖರ್‌ ಬಿಜೆಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.