ADVERTISEMENT

ಕರ್ನಾಟಕದಲ್ಲಿ ಹೂಡಿಕೆ: ಕೇರಳದ ಸಂಸ್ಥೆಗೆ ರಾಜೀವ್‌ ಚಂದ್ರಶೇಖರ್ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 16:34 IST
Last Updated 10 ಜುಲೈ 2021, 16:34 IST
ರಾಜೀವ್ ಚಂದ್ರಶೇಖರ್‌
ರಾಜೀವ್ ಚಂದ್ರಶೇಖರ್‌   

ತಿರುವನಂತಪುರ: ಕರ್ನಾಟಕದಲ್ಲಿ ಬಂಡವಾಳ ಹೂಡಬೇಕು ಎಂದು ಕೇರಳ ಮೂಲದ ಸಿದ್ಧ ಉಡುಪುಗಳ ಉತ್ಪಾದನಾ ಸಂಸ್ಥೆ ಕಿಟೆಕ್ಸ್‌ ಗಾರ್ಮೆಂಟ್ಸ್‌ಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಆಹ್ವಾನಿಸಿದ್ದಾರೆ.

ಕೇರಳ ಸರ್ಕಾರದದಿಂದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ₹ 3,500 ಕೋಟಿ ಹೂಡಿಕೆ ಮಾಡುವ ಪ್ರಸ್ತಾಪ ಹಿಂಪಡೆಯಲು ಸಂಸ್ಥೆ ಚಿಂತನೆ ನಡೆಸಿದೆ ಎಂಬ ಬೆಳವಣಿಗೆಯ ಹಿಂದೆಯೇ ಈ ಆಹ್ವಾನ ನೀಡಲಾಗಿದೆ.

ತೆಲಂಗಾಣ ಸರ್ಕಾರದ ಆಹ್ವಾನದ ಬಳಿಕ ಈಚೆಗೆ ಸಂಸ್ಥೆಯು ಆ ರಾಜ್ಯದಲ್ಲಿ ₹ 1,000 ಕೋಟಿ ಬಂಡವಾಳವನ್ನು ಹೂಡಿಕೆ ಮಾಡುವ ತೀರ್ಮಾನವನ್ನು ಪ್ರಕಟಿಸಿತ್ತು.

ADVERTISEMENT

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್‌, ಈಚೆಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಕುರಿತು ಟ್ವೀಟ್‌ ಮಾಡಿರುವ ಸಚಿವರು, ನಾನು ಕಿಟೆಕ್ಸ್ ಗಾರ್ಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಬು ಜಾಕೋಬ್‌ ಜೊತೆ ಚರ್ಚಿಸಿದ್ದು, ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ಟ್ವೀಟ್ ಅನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಖಾತೆಗೂ ಟ್ಯಾಗ್‌ ಮಾಡಿದ್ದಾರೆ.

ಈ ಮಧ್ಯೆ, ಕೇರಳ ಬಂಡವಾಳ ಹೂಡಿಕೆ ಸ್ನೇಹಿ ರಾಜ್ಯವಲ್ಲ ಎಂಬ ಕಿಟೆಕ್ಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಲ್ಲಗಳೆದಿದ್ದಾರೆ. ಗೊಂದಲ ಬಗೆಹರಿಸುವ ಕ್ರಮವಾಗಿ ಏಕಗವಾಕ್ಷಿ ವ್ಯವಸ್ಥೆ ಸೇರಿ ಉದ್ಯಮಗಳ ಸ್ಥಾಪನೆಗೆ ಪೂರಕವಾದ ವಿವಿಧ ಕ್ರಮಗಳನ್ನು ಪಟ್ಟಿಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.