ADVERTISEMENT

ಸಶಸ್ತ್ರ ಪಡೆಗಳ ಹಣಕಾಸು ಅಧಿಕಾರ ಹೆಚ್ಚಳ ಪ್ರಸ್ತಾವನೆಗೆ ರಾಜನಾಥ್ ಸಿಂಗ್ ಅನುಮೋದನೆ

ಪಿಟಿಐ
Published 7 ಸೆಪ್ಟೆಂಬರ್ 2021, 14:32 IST
Last Updated 7 ಸೆಪ್ಟೆಂಬರ್ 2021, 14:32 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್ (ಪಿಟಿಐ ಚಿತ್ರ)
ರಕ್ಷಣಾ ಸಚಿವ ರಾಜನಾಥ್ ಸಿಂಗ್ (ಪಿಟಿಐ ಚಿತ್ರ)   

ನವದೆಹಲಿ: ಆದಾಯ ಗಳಿಕೆ, ತ್ವರಿತವಾಗಿ ರಕ್ಷಣಾ ಉಪಕರಣಗಳ ಖರೀದಿ ಮತ್ತು ಕಾರ್ಯಾಚರಣೆಗೆ ಸನ್ನದ್ಧವಾಗಿರುವ ಸಲುವಾಗಿ ಸಶಸ್ತ್ರ ಪಡೆಗಳ ಹಣಕಾಸು ಅಧಿಕಾರವನ್ನು ಹೆಚ್ಚಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.

ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥರ ಹಣಕಾಸು ಅಧಿಕಾರವನ್ನು ಶೇ 10ರಷ್ಟು ಹೆಚ್ಚಿಸಲಾಗಿದ್ದು ಗರಿಷ್ಠ ಮಿತಿಯನ್ನು ₹500 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತುರ್ತು ರಕ್ಷಣಾ ಉಪಕರಣಗಳ, ಯುದ್ಧೋಪಕರಣಗಳ ಖರೀದಿ, ತುರ್ತು ಕಾರ್ಯಾಚರಣೆ ಅಗತ್ಯತೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಫೀಲ್ಡ್ ಕಮಾಂಡರ್‌ಗಳು ಮತ್ತು ಇತರ ಅಧಿಕಾರಿಗಳಿಗೆ ಹೆಚ್ಚಿನ ಹಣಕಾಸು ಅಧಿಕಾರ ನೀಡಲು ಗಮನಹರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಭಾರತೀಯ ವಾಯುಪಡೆಗೆ ವಿಮಾನಗಳು, ಆಗಸದಲ್ಲೇ ಇಂಧನ ತುಂಬಿಸುವ ವಿಮಾನಗಳು ಮತ್ತು ಸಂಬಂಧಿತ ಉಪಕರಣಗಳ ಖರೀದಿಗೆ ಸಂಬಂಧಿಸಿ ಹೊಸ ವಿಧಾನವನ್ನೂ ಪರಿಚಯಿಸಲಾಗಿದೆ.

ಸಶಸ್ತ್ರ ಪಡೆಗಳ ಹಣಕಾಸು ಅಧಿಕಾರ ಹೆಚ್ಚಿಸುವ ಈ ನಿರ್ಧಾರವು ರಕ್ಷಣಾ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ ಎಂದು ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.