
ಪಟ್ನಾ: ನಮ್ಮ ಸೇನಾ ಪಡೆಗಳು ತೋರಿದ ಶೌರ್ಯಕ್ಕೆ ಗೌರವ ಸಲ್ಲಿಸದೇ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ‘ಆಪರೇಷನ್ ಸಿಂಧೂರ’ದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವುದು ಸರಿಯಲ್ಲ ಎಂದು ರಕ್ಷಣಾ ರಚಿವ ರಾಜನಾಥ ಸಿಂಗ್ ಶನಿವಾರ ಹರಿಹಾಯ್ದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್, ‘ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಒಳನುಸುಳುವಿಕೆ ಬಗ್ಗೆ ಮೃದು ಧೋರಣೆ ಅನುಸರಿಸಿತ್ತು. ವೋಟ್ ಬ್ಯಾಂಕ್‌ಗಾಗಿ ಕೇಸರಿ ಭಯೋತ್ಪಾದನೆ ಎಂದು ಬಿಂಬಿಸಿ ಅಮಾಯಕರನ್ನು ಸಿಲುಕಿಸುವ ಪ್ರಯತ್ನ ನಡೆಸಿತು. ಮಾಲೆಗಾವ್ ಪ್ರಕರಣವೇ ಇದಕ್ಕೆ ಸಾಕ್ಷಿ’ ಎಂದರು.
’ಸದನದಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ನಡೆದ ಚರ್ಚೆ ಮೂಕವಿಸ್ಮಿತಗೊಳಿಸಿತು. 1971ರಲ್ಲಿ ಇಂದಿರಾ ಗಾಂಧಿ ಅವರನ್ನು ನಮ್ಮ ನಾಯಕ ಅಟಲ್ ಬಿಹಾರಿ ವಾಜಪೇಯಿ ಬೆಂಬಲಿಸಿದ್ದರು. 1999ರ ಕಾರ್ಗಿಲ್ ಸಮರ ವೇಳೆ ರಾಜಕೀಯ ಮತ್ತು ಸಾಮಾಜಿಕ ಐಕ್ಯತೆ ತೋರಲಾಯ್ತು. ಆದರೆ ಈಗ ನಮ್ಮ ಸೈನಿಕರ ಪರಾಕ್ರಮ ಅನುಮಾನಿಸಲಾಗುತ್ತಿದೆ’ ಎಂದರು.
2014ಕ್ಕೂ ಹಿಂದೆ ಭಯೋತ್ಪಾದಕ ದಾಳಿ ನಿತ್ಯದ ಸಂಗತಿಯಾಗಿತ್ತು. ಕಳೆದ 11 ವರ್ಷಗಳಲ್ಲಿ ಭಯೋತ್ಪಾದನೆ ನಿಯಂತ್ರಿಸಿದ್ದೇವೆ. ನಮ್ಮ ಯೋಧರ ಸ್ಥೈರ್ಯ ಎತ್ತರಕ್ಕೇರಿದೆ. ದೇಶ ಸುರಕ್ಷಿತ ಕೈನಲ್ಲಿದ್ದು ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಾಜನಾಥ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.