ADVERTISEMENT

ಲಡಾಖ್: ನವೀಕೃತ ಯುದ್ಧ ಸ್ಮಾರಕ ಉದ್ಘಾಟಿಸಿದ ರಾಜನಾಥ್‌ಸಿಂಗ್

1962ರಲ್ಲಿ ಚೀನಾ ವಿರುದ್ಧ ಭಾರತೀಯ ಯೋಧರು ಕೆಚ್ಚೆದೆಯ ಹೋರಾಟ ನಡೆಸಿದ ಸ್ಥಳ

ಪಿಟಿಐ
Published 18 ನವೆಂಬರ್ 2021, 10:34 IST
Last Updated 18 ನವೆಂಬರ್ 2021, 10:34 IST
ರಾಜನಾಥ್‌ ಸಿಂಗ್
ರಾಜನಾಥ್‌ ಸಿಂಗ್   

ನವದೆಹಲಿ: ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿರುವ, ನವೀಕರಣಗೊಳಿಸಲಾದ ಯುದ್ಧಸ್ಮಾರಕವನ್ನು ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ಗುರುವಾರ ಉದ್ಘಾಟಿಸಿದರು.

1962ರಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಸೈನಿಕರು ಈ ಸ್ಥಳದಲ್ಲಿ ಚೀನಾ ಯೋಧರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ್ದರು. ಹಾಗಾಗಿ ಈ ಸ್ಥಳದಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿದೆ.

‘ಈ ಸ್ಮಾರಕ ಭಾರತೀಯ ಯೋಧರ ಅಗಾಧ ಶೌರ್ಯ ಹಾಗೂ ದೃಢನಿಶ್ಚಯದ ಪ್ರತೀಕವಾಗಿದೆ. ನಮ್ಮ ಸೇನೆಯ ಶೌರ್ಯ–ಪರಾಕ್ರಮ ಕೇವಲ ಇತಿಹಾಸ ಪುಟಗಳಲ್ಲಿ ಮಾತ್ರವಲ್ಲದೇ, ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಸ್ಥಾನ ಪಡೆದಿವೆ’ ಎಂದುಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ADVERTISEMENT

‘18,000 ಅಡಿ ಎತ್ತರದ ಪ್ರದೇಶವಾದ ರೇಜಾಂಗ್‌ ಲಾದಲ್ಲಿ ಯುದ್ಧ ನಡೆದಿತ್ತು ಎಂಬುದನ್ನು ಈಗಲೂ ಕಲ್ಪಿಸಿಕೊಳ್ಳುವುದು ಕಷ್ಟ. ಮೇಜರ್‌ ಶೈತಾನ್‌ ಸಿಂಗ್‌ ಹಾಗೂ ಅವರ ನೇತೃತ್ವದ ಪಡೆಯ ಯೋಧರು ತಮ್ಮ ಕೊನೆಯ ಉಸಿರು, ಕೊನೆಯ ಗುಂಡು ಇರುವವರೆಗೆ ಹೋರಾಡಿದರು. ಆ ಮೂಲಕ ಧೈರ್ಯ, ತ್ಯಾಗದ ಹೊಸ ಅಧ್ಯಾಯವನ್ನೇ ಬರೆದರು’ ಎಂದೂ ಹೇಳಿದರು.

ಕಳೆದ ಒಂದೂವರೆ ವರ್ಷದಿಂದ ಪೂರ್ವ ಲಡಾಖ್‌ ಗಡಿಯಲ್ಲಿ ಭಾರತದೊಂದಿಗೆ ಚೀನಾ ಸಂಘರ್ಷಕ್ಕೆ ಇಳಿದಿದೆ. ಇಂಥ ಸಂದರ್ಭದಲ್ಲಿಯೇ ನವೀಕೃತ ಈ ಯುದ್ಧಸ್ಮಾರಕವನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.