ADVERTISEMENT

ಯೋಧರ ಶೌರ್ಯವನ್ನು ಎಷ್ಟು ಹೊಗಳಿದರೂ ಸಾಲದು: ರಾಜನಾಥ್ ಸಿಂಗ್

ಉದ್ಯಮ ಒಕ್ಕೂಟ ಫಿಕ್ಕಿಯ ಸಭೆಯಲ್ಲಿ ಸಚಿವ ರಾಜನಾಥ್ ಸಿಂಗ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 19:42 IST
Last Updated 17 ಡಿಸೆಂಬರ್ 2022, 19:42 IST
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌   

ನವದೆಹಲಿ (ಪಿಟಿಐ): ಚೀನಾದ ಸೈನಿಕರ ಜೊತೆಗೆ, ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷ ಮತ್ತು ಅರುಣಾಚಲ ಪ್ರದೇಶದ ತವಾಂಗ್‌ ವಲಯದಲ್ಲಿ ನಡೆದ ಜಟಾಪಟಿಯಲ್ಲಿ ಭಾರತದ ಯೋಧರು ತೋರಿದ ದಿಟ್ಟತನ ಮತ್ತು ಶೌರ್ಯವನ್ನು ಎಷ್ಟು ಹೊಗಳಿದರೂ ಸಾಲದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದ್ದಾರೆ.

ಉದ್ಯಮ ಒಕ್ಕೂಟ ಫಿಕ್ಕಿಯ ಸಭೆ ಯೊಂದರಲ್ಲಿ ಅವರು ಮಾತನಾಡಿದರು.

ಜಾಗತಿಕ ಸಮೃದ್ಧಿಗಾಗಿ ಸೂಪರ್‌ ಪವರ್‌ ಆಗಲು ಭಾರತ ಬಯಸುತ್ತಿದೆ. ಆದರೆ, ಬೇರೊಂದು ದೇಶದ ಮೇಲೆ ದಬ್ಬಾಳಿಕೆ ನಡೆಸಲು ಅಥವಾ ಒಂದು ಇಂಚಿನಷ್ಟಾದರೂ ನೆಲವನ್ನು ಕಬಳಿಸಲು ಭಾರತ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಗಡಿಯಲ್ಲಿ ಚೀನಾ ನಡೆಸುತ್ತಿರುವ ಅತಿಕ್ರಮಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.

ADVERTISEMENT

ಚೀನಾದೊಂದಿಗಿನ ಗಡಿಯಾಗಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದಿಂದ ಇರುವ ಅಪಾಯವನ್ನು ಸರ್ಕಾರ ನಿರ್ಲಕ್ಷಿಸು ತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದ್ದಕ್ಕೆ ರಾಜನಾಥ್ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

‘ವಿರೋಧ ಪಕ್ಷದ ಯಾವುದೇ ನಾಯಕನ ಉದ್ದೇಶವನ್ನು ನಾವು ಎಂದೂ ಪ್ರಶ್ನಿಸಿಲ್ಲ. ನೀತಿಗಳ ನೆಲೆಗಟ್ಟು ಏನು ಎಂಬುದನ್ನು ಮಾತ್ರ ನಾವು ಚರ್ಚಿಸಿದ್ದೇವೆ. ರಾಜಕಾರಣವು ಸತ್ಯವನ್ನು ಆಧರಿಸಿ ಇರಬೇಕು. ಸುಳ್ಳನ್ನೇ ಆಧಾರವಾಗಿ ಇರಿಸಿರುವ ರಾಜಕಾರಣ ಬಹಳ ಕಾಲ ಬಾಳುವುದಿಲ್ಲ’ ಎಂದು ರಾಜನಾಥ್‌ ಹೇಳಿದ್ದಾರೆ.

ಭಾರತ ಮತ್ತು ಚೀನಾ ಸೈನಿಕರ ನಡುವೆ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿಸೆಂಬರ್ 9ರಂದು ಸಂಘರ್ಷ ನಡೆದಿತ್ತು.

ಗಾಲ್ವನ್‌ ಕಣಿವೆಯಲ್ಲಿ 2020ರಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಭಾರಿ ಜಟಾಪಟಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.