ರಾಜ್ಯಸಭೆ ಕಲಾಪ
ನವದೆಹಲಿ: ಬಿಹಾರ ಮತ್ತು ಇತರ ರಾಜ್ಯಗಳಲ್ಲಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ರಾಜ್ಯಸಭೆಯ ಸಭಾಪತಿಯ ಪೀಠದ ಮುಂಭಾಗ ಪ್ರತಿಭಟಿಸಲು ಮುಂದಾದಾಗ ಮಾರ್ಷಲ್‌ಗಳು ಅಡ್ಡಿಪಡಿಸಿದ್ದು ಸರಿಯಲ್ಲ ಎಂದು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಶುಕ್ರವಾರ ಆಕ್ಷೇಪಿಸಿದರು.
ರಾಜ್ಯಸಭೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಏನಾದರೂ ವಶಕ್ಕೆ ಪಡೆದಿದೆಯೇ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಸದನವು ಮಧ್ಯಾಹ್ನ 12 ಗಂಟೆಗೆ ಮತ್ತೆ ಸೇರಿದಾಗ, ತೃಣಮೂಲ ಕಾಂಗ್ರೆಸ್, ಡಿಎಂಕೆ ಸದಸ್ಯರು ಸಭಾಪತಿಯ ಪೀಠದ ಮುಂಭಾಗ ಪ್ರವೇಶಿಸಲು ಮುಂದಾದರು. ಆಗ ಅವರನ್ನು ಮಾರ್ಷಲ್‌ಗಳು ತಡೆದರು. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಾರ್ಷಲ್‌ಗಳ ಕ್ರಮವನ್ನು ವಿರೋಧಿಸಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉಪಸಭಾಪತಿ ಹರಿವಂಶ್ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸದಸ್ಯರು ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸುವಾಗ ಸಿಐಎಸ್‌ಎಫ್ ಸಿಬ್ಬಂದಿ ಸದನದೊಳಗೆ ಓಡೋಡಿ ಬರುವುದನ್ನು ನೋಡಿ ಆಶ್ಚರ್ಯ ಮತ್ತು ಆಘಾತವಾಯಿತು’ ಎಂದು ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.
‘ಗುರುವಾರ ಮತ್ತು ಶುಕ್ರವಾರ ಎರಡೂ ದಿನವೂ ಈ ದೃಶ್ಯಗಳನ್ನು ನೋಡಿದ್ದೇವೆ. ನಮ್ಮ ಸಂಸತ್ತು ಈ ಮಟ್ಟಕ್ಕೆ ಇಳಿದಿದೆಯೇ? ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಭವಿಷ್ಯದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯಿಂದ ಈ ರೀತಿಯ ವರ್ತನೆ ಮರುಕಳಿಸಬಾರದು ಎಂದು ನಿರೀಕ್ಷಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ರಾಜ್ಯಸಭೆಯ ಕಲಾಪಗಳನ್ನು ತಡೆಯಲು ಕೆಲ ಸದಸ್ಯರು ಆಕ್ರಮಣಕಾರಿಯಾಗಿ ನಡೆದುಕೊಂಡರು. ಅದಾಗ್ಯೂ ಸದನದೊಳಗಿನ ಭದ್ರತಾ ವಿಷಯ ಸಭಾಪತಿ ನೋಡಿಕೊಳ್ಳುತ್ತಾರೆಯೇ ಹೊರತು ಸರ್ಕಾರವಲ್ಲ– ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.