ADVERTISEMENT

ಉತ್ತರ ಪ್ರದೇಶ‌| ಹಿಂದೂ, ಮುಸ್ಲಿಂ ಕೈದಿಗಳಿಂದ ರಂಜಾನ್‌, ನವರಾತ್ರಿ ಆಚರಣೆ

ಪಿಟಿಐ
Published 26 ಮಾರ್ಚ್ 2023, 12:58 IST
Last Updated 26 ಮಾರ್ಚ್ 2023, 12:58 IST
.
.   

ಆಗ್ರ (ಪಿಟಿಐ): ಕೋಮು ಸೌಹಾರ್ದ ಮತ್ತು ಭ್ರಾತೃತ್ವ ಪ್ರದರ್ಶಿಸುವ ನಿಟ್ಟಿನಲ್ಲಿ ಇಲ್ಲಿಯ ಕೇಂದ್ರ ಕಾರಾಗೃಹದ ಮುಸ್ಲಿಂ ಮತ್ತು ಹಿಂದೂ ಕೈದಿಗಳು ಒಟ್ಟಾಗಿ ಸೇರಿ ನವರಾತ್ರಿ ಹಾಗೂ ರಂಜಾನ್‌ ಆಚರಣೆಯಲ್ಲಿ ತೊಡಗಿದ್ದಾರೆ.

ಕೆಲ ಹಿಂದೂ ಕೈದಿಗಳು ರಂಜಾನ್‌ ಉಪವಾಸ (ರೋಜಾ) ಕೈಗೊಂಡರೆ, ಕೆಲ ಮುಸ್ಲಿಂ ಕೈದಿಗಳು ನವರಾತ್ರಿ ಉಪವಾಸ ಕೈಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

9 ದಿನಗಳ ಚೈತ್ರ ನವರಾತ್ರಿ ಆಚರಣೆಯು ಮಾರ್ಚ್‌ 22ರಂದು ಆರಂಭವಾಯಿತು. ಮಾರ್ಚ್‌ 23ರಿಂದ ರಂಜಾನ್‌ ಮಾಸ ಆರಂಭವಾಗಿದೆ.

ADVERTISEMENT

ಕೈದಿಗಳು ಒಟ್ಟಾಗಿ ಸೇರಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಒಗ್ಗಟ್ಟಿನ ಕುರಿತು ಸಂದೇಶ ಸಾರುತ್ತಿರುವುದು ಉತ್ತಮ ಚಿಂತನೆಯಾಗಿದೆ ಎಂದು ಕಾರಾಗೃಹದ ಡಿಐಜಿ ತಿಳಿಸಿದ್ದಾರೆ.

ಈ ಆಚರಣೆಗಳಿಗೆ ಸಂಬಂಧಿಸಿದ ವಿಡಿಯೊವೊಂದನ್ನು ಜೈಲು ಆಡಳಿತ ಬಿಡುಗಡೆ ಮಾಡಿದೆ. ನೌಷಾದ್‌ ಎಂಬ ಕೈದಿಯು ನವರಾತ್ರಿ ಆಚರಣೆ ಕುರಿತು ಹೀಗೆ ಹೇಳಿದ್ದಾನೆ. ‘ನವರಾತ್ರಿಯ ಮೊದಲ ದಿನ ಉಪವಾಸ ಕೈಗೊಂಡಿದ್ದೆ. ಕಡೆಯ ದಿನವೂ ಉಪವಾಸ ಕೈಗೊಳ್ಳುತ್ತೇನೆ. ನಾವು ಇಲ್ಲಿ ಒಗ್ಗಟ್ಟಿನಿಂದ ಮತ್ತು ಎಲ್ಲರ ಧಾರ್ಮಿಕ ಭಾವನೆಯನ್ನು ಗೌರವದಿಂದ ಕಾಣುತ್ತಾ ವಾಸಿಸುತ್ತಿದ್ದೇವೆ. ಜೈಲಿನ ಆವರಣದಲ್ಲಿರುವ ದೇವಸ್ಥಾನದಲ್ಲಿ ನಡೆಯುವ ಭಜನೆಯಲ್ಲೂ ಪಾಲ್ಗೊಳ್ಳುತ್ತೇವೆ’ ಎಂದಿದ್ದಾನೆ.

ಕಾರಾಗೃಹದಲ್ಲಿ 905 ಕೈದಿಗಳಿದ್ದಾರೆ. ಅವರಲ್ಲಿ 17 ಜನ ಮುಸ್ಲಿಮರು ನವರಾತ್ರಿ ಉಪವಾಸ ಕೈಗೊಂಡಿದ್ದಾರೆ. 37 ಹಿಂದೂಗಳು ರಂಜಾನ್‌ ಉಪವಾಸ ಕೈಗೊಂಡಿದ್ದಾರೆ ಎಂದು ಜೈಲು ಸಿಬ್ಬಂದಿ ಅಲೋಕ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.