ADVERTISEMENT

‘ರಾಮಸೇತು’ವಾದ ಕೇರಳದ ಪೊನ್ನಾನಿ ಬೀಚ್!

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 19:35 IST
Last Updated 10 ಅಕ್ಟೋಬರ್ 2018, 19:35 IST
ಪೊನ್ನಾನಿ ಬೀಚ್‌
ಪೊನ್ನಾನಿ ಬೀಚ್‌   

ಬೆಂಗಳೂರು: ‘ರಾಮಸೇತುವಿನ ಮೇಲೆ ಜನ ನಿಂತುಕೊಂಡಿರುವುದನ್ನು ನೋಡಿ’ ಎಂಬ ಸಂದೇಶದ ಜತೆಗೆ ಅದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ವೈರಲ್ ಆಗಿದೆ. ಆದರೆ ಅದು ರಾಮಸೇತುವಲ್ಲ, ಕೇರಳದ ಪೊನ್ನಾನಿ ಬೀಚ್ ಎಂಬ ವಾಸ್ತವ ಈಗ ಬಯಲಾಗಿದೆ.

ಕೇಂದ್ರ ಗೃಹ ಇಲಾಖೆಯ ಸಲಹೆಗಾರ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಫಾಲೋ ಮಾಡುತ್ತಿರುವ ರವಿ ರಂಜನ್ ಎಂಬುವವರೂ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಸಮುದ್ರ ಮಧ್ಯದಲ್ಲಿ ರಾಮಸೇತುವಿನ ಮೇಲೆ ಜನ ನಿಂತುಕೊಂಡಿರುವುದನ್ನು ನೋಡಿ. ಎಂಜಿನಿಯರಿಂಗ್‌ನ ಅದ್ಭುತ. ಈ ‘ಸಿಕ್ಯುಲರ್‌’ಗಳು ಇದನ್ನು ಕಟ್ಟುಕತೆ ಅನ್ನುತ್ತಾರೆ, ಏನು ವಿಚಿತ್ರ!! ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ Dr. @Swamy39 ನಿಮಗೆ ಧನ್ಯವಾದ. ಜೈ ಶ್ರೀರಾಮ್!’ ಎಂದು ಸಂದೇಶ ಪ್ರಕಟಿಸಿರುವ ರವಿ ರಾಜನ್ ವಿಡಿಯೊವನ್ನೂ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಸಮುದ್ರದಲ್ಲಿರುವ ಮರಳಿನ ಭೂಭಾಗದಲ್ಲಿ ನೂರಾರು ಜನ ನಿಂತಿರುವುದೂ ಅದರಲ್ಲಿ ಕಾಣಿಸುತ್ತದೆ. ಈ ವಿಡಿಯೊ ತಮಗೆ ವಾಟ್ಸ್‌ಆ್ಯಪ್ ಮೂಲಕ ದೊರೆತಿದೆ ಎಂದೂ ರಂಜನ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಬಿಜೆಪಿ ಸಂಸದ ಪರೇಶ್ ರಾವಲ್, ಸಿನಿಮಾ ನಿರ್ಮಾಪಕಿ ಪ್ರಿಯಾ ಗುಪ್ತಾ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನ ಇದನ್ನು ರಿಟ್ವೀಟ್ ಮಾಡಿದ್ದಾರೆ.

ರಾಮಸೇತುವಲ್ಲ, ಪೊನ್ನಾನಿ ಬೀಚ್

ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಪಾಕ್‌ ಜಲಸಂಧಿ ಬಳಿ ರಾಮಸೇತು ಇದೆ. ಆದರೆ, ವೈರಲ್ ಆದ ವಿಡಿಯೊದಲ್ಲಿರುವುದು ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಬೀಚ್ ಎಂದು ಆಲ್ಟ್‌ ನ್ಯೂಸ್ ಸುದ್ದಿತಾಣ ವರದಿ ಮಾಡಿದೆ. ಸಮುದ್ರ ಮಧ್ಯೆ ಜನರು ನಿಂತಿರುವ ಭೂಭಾಗ ಜುಲೈನಲ್ಲಿ ಸಂಭವಿಸಿದ್ದ ಪ್ರವಾಹದ ನಂತರ ಸೃಷ್ಟಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು, ಸಮುದ್ರದಲ್ಲಿ ಜನರು ನಿಂತಿರುವ ದೃಶ್ಯವನ್ನು ಸೆರೆಹಿಡಿದ ಅಭಿಲಾಷ್ ವಿಶ್ವ ಎಂಬುವವರು ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸೆಪ್ಟೆಂಬರ್ 15ರಂದು ಪೊನ್ನಾನಿಯಲ್ಲಿ ವಿಡಿಯೊ ಮಾಡಲಾಗಿದೆ. ಈಗ ಅದು ರಾಮಸೇತು ಎಂಬ ಸುಳ್ಳು ಸಂದೇಶ ದೇಶದ ಹಲವು ರಾಜ್ಯಗಳಲ್ಲಿ ಹಲವು ಭಾಷೆಗಳಲ್ಲಿ ಹರಿದಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.ಕೇರಳದಲ್ಲಿ ಕೆಲವು ತಿಂಗಳುಗಳ ಹಿಂದೆ ಸಂಭವಿಸಿದ್ದ ಭೀಕರ ಪ್ರವಾಹದ ಬಳಿಕ ಪೊನ್ನಾನಿ ಬೀಚ್‌ ಬಳಿ ಸಮುದ್ರ ಮಧ್ಯೆ ಭೂಭಾಗ ಸೃಷ್ಟಿಯಾಗಿರುವ ಬಗ್ಗೆ ದಿ ನ್ಯೂಸ್ ಮಿನಿಟ್ ಮತ್ತು ಇಂಡಿಯಾ ಟೈಮ್ಸ್‌ ವರದಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.