ADVERTISEMENT

ರಾಮನ ದರ್ಶನಕ್ಕೆ ಹಟ

ವಿಎಚ್‌ಪಿಯ ಧರ್ಮಸಭೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:30 IST
Last Updated 21 ನವೆಂಬರ್ 2018, 20:30 IST
   

ಲಖನೌ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಂದಿರ ನಿರ್ಮಾಣ ಶೀಘ್ರವೇ ಆಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಶಿವಸೇನಾ ಒತ್ತಾಯಿಸುತ್ತಿವೆ.

ಈ ಒತ್ತಾಯದ ಭಾಗವಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ದೇಶದಾದ್ಯಂತ ಮೂರು ಧರ್ಮಸಭೆಗಳನ್ನು ಆಯೋಜಿಸಿದೆ. ಮೊದಲ ಧರ್ಮಸಭೆ ಇದೇ 25ರಂದು ಅಯೋಧ್ಯೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಲಕ್ಷಕ್ಕೂ ಹೆಚ್ಚು ರಾಮಭಕ್ತರು ಸೇರಲಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನ ಸೇರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಎಂಬ ಕಾರಣಕ್ಕೆ ನಿಷೇಧಾಜ್ಞೆ ಹೇರಲು ಜಿಲ್ಲಾಡಳಿತ ನಿರ್ಧರಿಸಿದೆ.

ಧರ್ಮಸಭೆಯಲ್ಲಿ ಪಾಲ್ಗೊಳ್ಳುವ ರಾಮಭಕ್ತರಿಗೆ ವಿವಾದಿತ ಸ್ಥಳದಲ್ಲಿರುವ ರಾಮನ ಮೂರ್ತಿಯ ದರ್ಶನ ಪಡೆಯಲು ಅವಕಾಶ ನೀಡಬೇಕು ಎಂದು ವಿಎಚ್‌ಪಿ ಆಗ್ರಹಿಸಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ADVERTISEMENT

‘ಲಕ್ಷಕ್ಕೂ ಹೆಚ್ಚು ರಾಮಭಕ್ತರು ಸೇರಿದರೆ ಸಂಘರ್ಷ ಉಂಟಾಗಬಹುದು. ನಮಗೆ ಸೂಕ್ತ ಭದ್ರತೆ ಒದಗಿಸದಿದ್ದರೆ ಧರ್ಮಸಭೆ ಮುಗಿಯುವವರೆಗೂ ಅಯೋಧ್ಯೆಯನ್ನು ಬಿಟ್ಟು ಹೋಗುತ್ತೇವೆ’ ಎಂದು ಮುಸ್ಲಿಂ ಸಮುದಾಯದ ಜನರು ಹೇಳಿದ್ದಾರೆ.

ಜನಸಾಗರ:‘500ಕ್ಕೂ ಹೆಚ್ಚು ಸಾಧುಸಂತರು ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ. ಲಕ್ಷಕ್ಕೂ ಹೆಚ್ಚು ರಾಮಭಕ್ತರು ಅಯೋಧ್ಯೆಯಲ್ಲಿ ಸೇರಲಿದ್ದಾರೆ. 1992ರಲ್ಲಿ ಇಲ್ಲಿ ಸೇರಿದ್ದಕ್ಕಿಂತಲೂ ಹೆಚ್ಚಿನ ಜನರು ಈ ಬಾರಿ ಬರಲಿದ್ದಾರೆ. ಅಯೋಧ್ಯೆಯಲ್ಲಿ ಅಂದು ನೀವು ‘ಜನ ಸಾಗರ’ವನ್ನು ನೋಡಲಿದ್ದೀರಿ’ ಎಂದು ವಿಎಚ್‌ಪಿಯ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

ನಿಷೇಧಾಜ್ಞೆ ಜಾರಿ:ವಿಎಚ್‌ಪಿಯ ಘೋಷಣೆಯ ಬೆನ್ನಲ್ಲೇ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ‘ಜನರು ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಜಿಲ್ಲಾಡಳಿತವು ಹೇಳಿದೆ.

ಇವೆಲ್ಲಾ ನಿಷೇಧ: ಕ್ಯಾಮೆರಾ, ದೊಣ್ಣೆ,ಯಾವುದೇ ರೀತಿಯ ಅಸ್ತ್ರಗಳು, ದೊಡ್ಡ ಗುಂಪುಗಳಿಗೆ ನಿಷೇಧ. ನಾಲ್ಕೈದು ಜನರ ಸಣ್ಣ ಗುಂಪುಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ.

ಮಂದಿರ: ನಿರ್ಧಾರಅಚಲ

ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ನಿರ್ಣಯ ಜಾರಿಗೊಳಿಸಿದ ಏಕೈಕ ಪಕ್ಷ ಬಿಜೆಪಿಯಾಗಿದ್ದು, ಈ ನಿರ್ಧಾರ ಅಚಲ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಬುಧವಾರ ಹೇಳಿದ್ದಾರೆ.

ನವೆಂಬರ್ 25ರಂದು ಆಯೋಜನೆಗೊಂಡಿರುವ ಧರ್ಮಸಭೆಗೂ ಮುನ್ನ ಪಾಂಡೆ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ ‍ಪಕ್ಷವು ಮಂದಿರ ವಿಷಯವನ್ನು 2019ರ ಲೋಕಸಭಾ ಚುನಾವಣೆಯ ವಿಷಯವನ್ನಾಗಿ ಮಾಡಿಕೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.