ADVERTISEMENT

ಜಾತಿ ಗಣತಿಯತ್ತ ರಾಮದಾಸ್ ಅಠಾವಳೆ ಒಲವು

ಆರ್ಥಿಕವಾಗಿ ದುರ್ಬಲವಾಗಿರುವವರ ಶೇ 10ರ ಮೀಸಲಾತಿಗೆ ಧಕ್ಕೆ ಇಲ್ಲ– ಸ್ಪಷ್ಟನೆ

ಪಿಟಿಐ
Published 12 ಸೆಪ್ಟೆಂಬರ್ 2021, 13:41 IST
Last Updated 12 ಸೆಪ್ಟೆಂಬರ್ 2021, 13:41 IST
ರಾಮದಾಸ್ ಅಠಾವಳೆ
ರಾಮದಾಸ್ ಅಠಾವಳೆ   

ಚೆನ್ನೈ: ‘ವಿವಿಧ ಸಮುದಾಯಗಳ ನಿಖರವಾದ ಜನಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಜಾತಿ ಆಧಾರಿತ ಗಣತಿ ಅಗತ್ಯವಾಗಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ಭಾನುವಾರ ಹೇಳಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾತಿ ಗಣತಿಯಿಂದಾಗಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಬಿಜೆಪಿ ನೇತೃತ್ವದ ಸರ್ಕಾರವು ನೀಡಿರುವ ಶೇ 10 ರಷ್ಟು ಮೀಸಲಾತಿ ವ್ಯವಸ್ಥೆ ಮೇಲೆ ಇದು ಯಾವುದೇ ಪರಿಣಾಮ ಬೀರವುದಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಮೀಸಲಾತಿ ಹೆಚ್ಚಿಸುವಂತೆ ಕೋರಿ ವಿವಿಧ ಸಮುದಾಯಗಳಿಂದ ಬೇಡಿಕೆ ಬರುತ್ತಿದೆ. ಉದಾಹರಣೆಗೆ ತಮಿಳುನಾಡು ಶೇ 69ರಷ್ಟು ಪ್ರಮಾಣದಲ್ಲಿ ಮೀಸಲಾತಿಯನ್ನು ಖಾತ್ರಿ ಪಡಿಸುತ್ತದೆ. ಅಂತೆಯೇ ದೇಶದಾದ್ಯಂತ ಹಲವು ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂಬುದನ್ನು ಗಮನಿಸಬೇಕಿದೆ’ ಎಂದೂ ಅವರು ಹೇಳಿದರು.

ADVERTISEMENT

‘ವೈಯಕ್ತಿಕವಾಗಿ ನಾನು ಜಾತಿ ಆಧಾರಿತ ಜನಗಣತಿಗೆ ಆದ್ಯತೆ ನೀಡುತ್ತೇನೆ. ಆದರೆ ಅದನ್ನು ನಿರ್ಧರಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಷಯ’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥರೂ ಆಗಿರುವ ರಾಮದಾಸ್ ತಿಳಿಸಿದರು.

‘ದಶಕದ ನಂತರ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನರು ನೀಡಿರುವ ಸ್ಪಷ್ಟಸಂದೇಶವನ್ನು ಒಪ್ಪಿಕೊಳ್ಳಬೇಕು. ಆದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಜನರು ಎಐಎಡಿಎಂಕೆ–ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ದಲಿತರು ದೌರ್ಜನ್ಯಕ್ಕೊಳಗಾಗದಂತೆ ರಕ್ಷಣೆ ನೀಡಬೇಕು. ಅಂತೆಯೇ ಭೂರಹಿತ ಬಡವರಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಉಚಿತವಾಗಿ ಭೂಮಿಯನ್ನು ನೀಡಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.