ADVERTISEMENT

ಕೆನಡಾದ ಅಕ್ಷಯ್ ಜೊತೆ ಐಎನ್ಎಸ್ ಸುಮಿತ್ರದಲ್ಲಿ ಪ್ರಯಾಣ ಮರೆತಿಲ್ಲ-ರಮ್ಯಾ ತಿರುಗೇಟು

​ಪ್ರಜಾವಾಣಿ ವಾರ್ತೆ
Published 10 ಮೇ 2019, 16:03 IST
Last Updated 10 ಮೇ 2019, 16:03 IST
   

ನವದೆಹಲಿ: ಮೋದಿಯವರೆ ನೀವು ನಿಮ್ಮ ಜೊತೆಗೆ ಕೆನಡಾ ಪೌರತ್ವ ಹೊಂದಿರುವ ನಟ ಅಕ್ಷಯ್ ಕುಮಾರ್ ಹಾಗೂ ಕುಟುಂಬದವರು ನೌಕಾದಳದ ಐಎನ್‌ಎಸ್ ಸುಮಿತ್ರಾದಲ್ಲಿ 2016ರಲ್ಲಿ ತೆರಳಿದ್ದು, ಈ ಸಮಯದಲ್ಲಿ ಎದ್ದಿದ್ದ ವಿವಾದವನ್ನು ನಾವಿನ್ನೂ ಮರೆತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಂಸದೆ, ನಟಿ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ ಅವರ ಕುಟುಂಬದ ಪ್ರವಾಸದ ವಾಹನವಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಹೇಳಿಕೆಯೊಂದನ್ನ ನೀಡಿ, ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಇಲಾಖೆಯ ಅಧಿಕೃತ ಕಾರ್ಯಕ್ರಮದ ನಿಮಿತ್ತ ಐಎನ್ಎಸ್ ವಿರಾಟ್‌ನಲ್ಲಿ ತೆರಳಿದ್ದರು. ಆದರೆ, ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಭಾರತೀಯ ವಾಯುಪಡೆಯ ವಿಮಾನಗಳನ್ನು ತಮ್ಮ ಸ್ವಂತ ಟ್ಯಾಕ್ಸಿಯಂತೆ ಬಳಸುತ್ತಿದ್ದಾರೆ. ಕೇವಲ ಕಡಿಮೆ ದರ₹744 ನೀಡಿ ಬಳಸುತ್ತಿದ್ದಾರೆ ಎಂದು ತಿರುಗೇಟು ನೀಡಿತ್ತು.

ADVERTISEMENT

ಮೋದಿಯವರಿಗೆ ಪ್ರತ್ಯುತ್ತರ ನೀಡಿ ಗುರುವಾರ ಟ್ವೀಟ್ ಮಾಡಿರುವ ರಮ್ಯಾ '2016ರಲ್ಲಿ ತಾವು ಕೆನಡಾನಾಗರಿಕ ಅಕ್ಷಯ್‌‌ಕುಮಾರ್ ಅವರ ಜೊತೆ ಐಎನ್ಎಸ್ ಸುಮಿತ್ರಾದಲ್ಲಿ ಪ್ರಯಾಣಿಸಿದ್ದೀರ, ಇದಕ್ಕೆ ದೇಶದೆಲ್ಲೆಡೆ ಟೀಕೆಗಳು ಕೇಳಿ ಬಂದಿದ್ದವು'ಎಂದಿದ್ದಾರೆ.ಈ ಸಂಬಂಧ ಪ್ರಕಟವಾಗಿದ್ದ ಸುದ್ದಿಯ ಲಿಂಕ್ ಇಲ್ಲಿದೆ ನೋಡಿ ಎಂದೂಸುದ್ದಿಯ ಲಿಂಕ್ ಅನ್ನೂ ಟ್ವಿಟರ್‌‌ನಲ್ಲಿ ಸೇರಿಸಿದ್ದಾರೆ.

ನೌಕಾದಳ 2016ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಅಕ್ಷಯ್ ಕುಮಾರ್ ಕುಟುಂಬ, ನಟಿ ಕಂಗನಾ ಅವರನ್ನು ಆಹ್ವಾನಿಸಿತ್ತು. ಕಾರ್ಯಕ್ರಮದ ಮಾರನೆ ದಿನನಟ ಅಕ್ಷಯ್ ಕುಮಾರ್, ಪತ್ನಿ ಟ್ವಿಂಕಲ್ ಕನ್ನಾ, ಪುತ್ರ ಹಾಗೂ ಮತ್ತೊಬ್ಬ ನಟಿ ಕಂಗನಾ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಯವರಿಗೆ ಮೀಸಲಿರುವ ಐಎನ್ಎಸ್ ಸುಮಿತ್ರಾದಲ್ಲಿ ಪ್ರಯಾಣಿಸಿದ್ದರು. ಅಲ್ಲದೆ, ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರ ಪುತ್ರನ ಕಿವಿ ಹಿಡಿದು ಈತ ಒಳ್ಳೆಯ ಹುಡುಗ ಎಂದಿದ್ದರು.

ಭಾರತೀಯ ಸೇನೆ, ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಮೀಸಲಿರುವ ನೌಕಾದಳದ ಈ ಹಡಗಿನಲ್ಲಿ ಅದು ಹೇಗೆ ಬಾಲಿವುಡ್ ನಟನಟಿಯರು ಪ್ರಯಾಣಿಸಲು ಅವಕಾಶ ನೀಡಲಾಯಿತು. ಇದಕ್ಕೆ ಕಾನೂನಿನಲ್ಲಿ ಅವಕಾಶಇಲ್ಲ. ಈ ರೀತಿಯಾದರೆ, ನಮ್ಮ ದೇಶ ಕಾಯುವ ಸೇನೆಯ ಘನತೆಗೆ ಕುಂದುಂಟಾಗುತ್ತದೆ ಎಂದು ಹಲವು ಟೀಕೆಗಳು ವ್ಯಕ್ತವಾಗಿದ್ದವು.

ಈ ಕುರಿತು ನೌಕಾದಳ ಸ್ಪಷ್ಟನೆ ನೀಡಿ, ನಟ ಆಕ್ಷಯ್ ಹಾಗೂ ನಟಿ ಕಂಗನಾ ನೌಕಾದಳದ ಬ್ರಾಂಡ್ ಅಂಬಾಸಿಡರ್‌ಗಳು ಎಂದಿತ್ತು. ಆದರೆ, ಅಂದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರ್ರಿಕರ್ ಅವರು ನಟ ಅಕ್ಷಯ್ ಹಾಗೂ ನಟಿ ಕಂಗನಾ ಅವರ ಜೊತೆ ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಕೊಂಡಿಲ್ಲ. ಅವರು ನಮ್ಮ ಸೇನೆಯ ಯಾವುದೇ ವಿಭಾಗಕ್ಕೂ ಬ್ರಾಂಡ್ ಅಂಬಾಸಿಡರ್‌ಗಳಲ್ಲ ಎಂದು ನಿಜ ಸಂಗತಿಯನ್ನು ತಿಳಿಸಿದ್ದರು. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.ಇವೆಲ್ಲಾ ವಿವರ ಇರುವ ಲಿಂಕ್ ಒಂದನ್ನು ರಮ್ಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.