ADVERTISEMENT

ಅತ್ಯಾಚಾರ: ಭಾರಿ ಬದಲಾವಣೆ ತರದ ನಿರ್ಭಯಾ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 18:30 IST
Last Updated 7 ಡಿಸೆಂಬರ್ 2019, 18:30 IST
   

ನವದೆಹಲಿ: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ 2013ರಲ್ಲಿ ಅಪರಾಧ ಕಾನೂನು ಕಾಯ್ದೆಗೆ ತಿದ್ದುಪಡಿ ತರಲಾಯಿತು. ನಿರ್ಭಯಾ ಪ್ರಕರಣದ ಕಾವು ಜೋರಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಈ ಕಾನೂನನ್ನು ‘ನಿರ್ಭಯಾ ಕಾಯ್ದೆ’ ಎಂದೇ ಕರೆಯಲಾಯಿತು. ಕಠಿಣ ಕಾನೂನು ಜಾರಿಗೆ ಬಂದ ನಂತರವೂ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯೇ ಆಗಿದೆ.

*2018ನೇ ಸಾಲಿನ ‘ಭಾರತದಲ್ಲಿ ಅಪರಾಧ–2018’ ವರದಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಾಗಿ 2018ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ದತ್ತಾಂಶ ಲಭ್ಯವಿಲ್ಲ

ಲೋಕಸಭೆಯಲ್ಲೂ ಆರೋಪಿಗಳು

ADVERTISEMENT

ಲೋಕಸಭಾ ಸದಸ್ಯರಲ್ಲಿ ಅತ್ಯಾಚಾರದ ಆರೋಪಿಗಳೂ ಇದ್ದಾರೆ.

* 19 ಸದಸ್ಯರು ಮಹಿಳೆಯರ ವಿರುದ್ಧ ಎಸಗಿದ ಅಪರಾಧಗಳ ಆರೋಪ ಹೊತ್ತಿದ್ದಾರೆ. ಇವುಗಳಲ್ಲಿ ಅತ್ಯಾಚಾರ ಯತ್ನ, ಲೈಂಗಿಕ ದೌರ್ಜನ್ಯಗಳೂ ಇವೆ.

* 3 ಸದಸ್ಯರು ಅತ್ಯಾಚಾರದ ಆರೋಪ ಹೊತ್ತಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ವೈಎಸ್‌ಆರ್‌ಸಿಯ ಒಬ್ಬೊಬ್ಬರು ಅತ್ಯಾಚಾರದ ಆರೋಪಿಗಳಾಗಿದ್ದಾರೆ.

ಉನ್ನಾವ್: 11 ತಿಂಗಳಲ್ಲಿ 96 ಅತ್ಯಾಚಾರ

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ 2019ರ ಮೊದಲ 11 ತಿಂಗಳಲ್ಲಿ 96 ಅತ್ಯಾಚಾರ ಪ್ರಕರಣ ದಾಖಲಾಗಿವೆ.

ಆದರೆ, ಇವುಗಳಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಆರೋಪಿಯಾಗಿರುವ ಬಾಲಕಿ ಅತ್ಯಾಚಾರ ಪ್ರಕರಣ ಮತ್ತು ಶುಕ್ರವಾರ ಮೃತಪಟ್ಟ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪ್ರಕರಣಗಳು ಮಾತ್ರ ಹೆಚ್ಚು ಸುದ್ದಿಯಾದವು. ಉಳಿದ 94 ಅತ್ಯಾಚಾರ ಪ್ರಕರಣಗಳ ಸ್ಥಿತಿಗತಿ ಬಗ್ಗೆ ಹೆಚ್ಚಿನ ವಿವರ ಲಭ್ಯವಿಲ್ಲ.

‘ಇಲ್ಲಿ ಅತ್ಯಾಚಾರದ ದೂರುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಪ್ರಕರಣಗಳ ಆರೋಪಿಗಳು ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಪ್ರಬಲರಾಗಿರುತ್ತಾರೆ. ಉನ್ನಾವ್ ಜಿಲ್ಲೆಯ ರಾಜಕಾರಣಿಗಳ ಹುಕುಂ ಮೇರೆಗೆ ಪ್ರಕರಣಗಳು ದಾಖಲಾಗುತ್ತವೆ’ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಕುಲದೀಪ್‌ ಸಿಂಗ್ ಸೆಂಗರ್‌ ಆರೋಪಿಯಾಗಿರುವ ಪ್ರಕರಣ ಮತ್ತು ಶುಕ್ರವಾರ ಮೃತಪಟ್ಟ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪ್ರಕರಣಗಳು, ಈ ಹೇಳಿಕೆಯನ್ನು ಪುಷ್ಟೀಕರಿಸುತ್ತವೆ.

ಸೆಂಗರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಬಾಲಕಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿವಾಸದ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆನಂತರವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡದ್ದು.

ಶುಕ್ರವಾರ ಮೃತಪಟ್ಟ ಸಂತ್ರಸ್ತೆಯ ದೂರನ್ನು ದಾಖಲಿಸಿಕೊಳ್ಳಲೂ ಪೊಲೀಸರು ನಿರಾಕರಿಸಿದ್ದರು. ನ್ಯಾಯಾಲಯದ ನಿರ್ದೇಶನದ ನಂತರ ಪ್ರಕರಣ ದಾಖಲಾಗಿತ್ತು.

* 3,400 – ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ದಾಖಲಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು

* 31 ಲಕ್ಷ – ಜಿಲ್ಲೆಯ ಜನಸಂಖ್ಯೆ

* 907 – ಲಿಂಗಾನುಪಾತ

*66.37 % – ಸಾಕ್ಷರತೆ ಪ್ರಮಾಣ

ಅತ್ಯಾಚಾರಕ್ಕೆ ಯತ್ನ

ಉನ್ನಾವ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಶುಕ್ರವಾರ ಸಂಜೆ 3 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಮಗುವನ್ನು ಕಾಪಾಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.