ADVERTISEMENT

₹1,345 ಕೋಟಿ ವೆಚ್ಚದ ಯೋಜನೆ ಪ್ರಸ್ತಾವ: ಕೇಂದ್ರ ಬೃಹತ್‌ ಕೈಗಾರಿಕೆಗಳ ಸಚಿವ HDK

ಭಾರತದಲ್ಲಿಯೇ ವಿರಳ ಲೋಹ ಉತ್ಪಾದನೆಗೆ ಉತ್ತೇಜನ ಉದ್ದೇಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 15:19 IST
Last Updated 11 ಜುಲೈ 2025, 15:19 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ನವದೆಹಲಿ: ವಿರಳ ಲೋಹಗಳನ್ನು (ರೇರ್‌ ಅರ್ಥ್‌ ಮ್ಯಾಗ್ನೆಟ್‌ಗಳ) ದೇಶದಲ್ಲಿಯೇ ಉತ್ಪಾದಿಸುವುದನ್ನು ಉತ್ತೇಜಿಸುವುದಕ್ಕಾಗಿ ಸಹಾಯಧನ ನೀಡುವ ₹1,345 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ಸಚಿವಾಲಯಗಳ ನಡುವೆ ಸಮಾಲೋಚನೆಗಳು ನಡೆದಿವೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ.

ಅದಿರಿನ ಗಣಿಗಾರಿಕೆ, ಸಂಸ್ಕರಣೆಯಿಂದ ಹಿಡಿದು ಪೂರ್ಣಪ್ರಮಾಣದ ವಿರಳ ಲೋಹ ಸಿದ್ಧಗೊಳ್ಳುವವರೆಗೆವರೆಗಿನ ಕಾರ್ಯಕ್ಕೆ ಈ ಯೋಜನೆಯಡಿ ನೆರವು ನೀಡಲಾಗುತ್ತದೆ.

ವಿರಳ ಲೋಹಗಳ ರಫ್ತಿನ ಮೇಲೆ ಚೀನಾ ಈಚೆಗೆ ನಿರ್ಬಂಧ ವಿಧಿಸಿರುವ ಕಾರಣದಿಂದಾಗಿ ವಾಹನ ಮತ್ತು ಸೆಮಿಕಂಡಕ್ಟರ್ ಚಿಪ್‌ಗಳ ತಯಾರಿಕೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಈ ಕಾರಣಕ್ಕೆ ಈ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ADVERTISEMENT

‘ಇಬ್ಬರು ಉತ್ಪಾದಕರನ್ನು ಈ ಪ್ರಸ್ತಾವ ಒಳಗೊಂಡಿದೆ. ವಿವಿಧ ಸಚಿವಾಲಯಗಳ ನಡುವಿನ ಸಮಾಲೋಚನೆಗಳು ಪೂರ್ಣಗೊಂಡ ಬಳಿಕ, ಪ್ರಸ್ತಾವವನ್ನು ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು’ ಎಂದು ಎಚ್‌.ಡಿ.ಕುಮಾರಸ್ವಾಮಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಅದಿರುಗಳನ್ನು ಸಂಸ್ಕರಿಸಿ ವಿರಳ ಲೋಹಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುವ ಎರಡು ಕಂಪನಿಗಳಿಗೆ ಈ ಯೋಜನೆಯ ವಿವರಗಳನ್ನು ಕಳುಹಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಇದ್ದ ಬೃಹತ್‌ ಕೈಗಾರಿಕೆಗಳ ಸಚಿವಾಲಯ ಕಾರ್ಯದರ್ಶಿ ಕಮ್ರಾನ್‌ ರಿಜ್ವಿ ಹೇಳಿದರು. 

‘ನಮಗೆ ವಿರಳ ಲೋಹಗಳ ಅಗತ್ಯವಿದೆ. ಅವುಗಳನ್ನು ಯಾರು ಪೂರೈಸುತ್ತಾರೋ ಅವರಿಗೆ ಈ ಯೋಜನೆಯಡಿ ಪ್ರೋತ್ಸಾಹಕ ಸೌಲಭ್ಯಗಳನ್ನು ನೀಡುತ್ತೇವೆ. ಮೊದಲ ಹಂತದಲ್ಲಿ ₹1,345 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಇಬ್ಬರು ಉತ್ಪಾದಕರನ್ನು ಈ ಪ್ರಸ್ತಾವ ಒಳಗೊಂಡಿದೆ’ ಎಂದು ರಿಜ್ವಿ ಹೇಳಿದರು.

ಐಆರ್‌ಇಎಲ್ (ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್) ಭಾರತದ ಸರ್ಕಾರಿ ಸ್ವಾಮ್ಯದ ವಿರಳ ಲೋಹಗಳ ಗಣಿಗಾರಿಕಾ ಸಂಸ್ಥೆ. ದೇಶೀಯ ಬಳಕೆಗೆ ವಿರಳ ಲೋಹಗಳನ್ನು ಪೂರೈಸುವ ಸಲುವಾಗಿ ಅಣುಶಕ್ತಿ ಕಾಯ್ದೆಯ ಅನುಸಾರ ಈ ಸಂಸ್ಥೆಯನ್ನು 1950ರಲ್ಲಿ ಸ್ಥಾಪಿಸಲಾಗಿದೆ.

ಎಲೆಕ್ಟ್ರಿಕ್‌ ಟ್ರಕ್‌ ಖರೀದಿಗೆ ಪ್ರೋತ್ಸಾಹ

‘ಪಿಎಂ ಇ–ಡ್ರೈವ್’ಗೆ ಚಾಲನೆ ನವದೆಹಲಿ: ಎಲೆಕ್ಟ್ರಿಕ್‌ ಟ್ರಕ್‌ ಖರೀದಿಸುವವರಿಗೆ ಗರಿಷ್ಠ ₹9.6 ಲಕ್ಷ ವರೆಗೆ ಪ್ರೋತ್ಸಾಹಧನ ನೀಡುವ ‘ಪಿಎಂ ಇ–ಡ್ರೈವ್‌’ ಯೋಜನೆಗೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಚಾಲನೆ ನೀಡಿದರು. ಎಲೆಕ್ಟ್ರಿಕ್‌ ವಾಹನಗಳ ಖರೀದಿ ಪ್ರೋತ್ಸಾಹಿಸುವ ಸಂಬಂಧ ₹10900 ಕೋಟಿ ಗಾತ್ರದ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಪೈಕಿ ಎಲೆಕ್ಟ್ರಿಕ್‌ ಟ್ರಕ್‌ಗಳ ಖರೀದಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ₹500 ಕೋಟಿ ತೆಗೆದಿರಿಸಲಾಗಿದೆ. ಒಟ್ಟು 5600 ಎಲೆಕ್ಟ್ರಿಕ್‌ ಟ್ರಕ್‌ಗಳ ಖರೀದಿಗೆ ಈ ಯೋಜನೆಯಡಿ ನೆರವು ನೀಡಲಾಗುತ್ತಿದ್ದು ಬಂದರು ಸರಕು ಸಾಗಣೆ ಸಿಮೆಂಟ್‌ ಹಾಗೂ ಉಕ್ಕು ಕ್ಷೇತ್ರಗಳ ಉದ್ದಿಮೆಗಳಿಗೆ ಪ್ರಯೋಜನವಾಗಲಿದೆ.  ‘ಮೇಕ್‌ ಇನ್‌ ಇಂಡಿಯಾಗೆ ಉತ್ತೇಜನ ನೀಡಲು ಸ್ಥಳೀಯವಾಗಿ ಉತ್ಪಾದನೆ ಹೆಚ್ಚಿಸುವುದು ಸಾಗಣೆ ವೆಚ್ಚ ತಗ್ಗಿಸುವುದು ಎಲೆಕ್ಟ್ರಿಕ್‌ ವಾಹನ ಮತ್ತು ಬ್ಯಾಟರಿ ತಯಾರಿಕೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ಪಿಎಂ ಇ–ಡ್ರೈವ್ ಸಹಕಾರಿಯಾಗಲಿದೆ’ ಎಂದು ಕುಮಾರಸ್ವಾಮಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.