ADVERTISEMENT

ಭಗತ್‌ ಸಿಂಗ್‌ನಂತೆ ಗಲ್ಲಿಗೇರಿಸುವ ದೃಶ್ಯದಲ್ಲಿ ನಟಿಸುತ್ತಿದ್ದ ಬಾಲಕ ಸಾವು

ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದ ಘಟನೆ

ಪಿಟಿಐ
Published 31 ಜುಲೈ 2021, 10:36 IST
Last Updated 31 ಜುಲೈ 2021, 10:36 IST
ಭಗತ್ ಸಿಂಗ್, ಸಾಂದರ್ಭಿಕ ಚಿತ್ರ
ಭಗತ್ ಸಿಂಗ್, ಸಾಂದರ್ಭಿಕ ಚಿತ್ರ   

ಬದೌನ್‌(ಉತ್ತರ ಪ್ರದೇಶ): ಸ್ವಾತಂತ್ರ್ಯ ದಿನಾಚರಣೆಯಂದು ಪ್ರದರ್ಶನಗೊಳ್ಳಬೇಕಿದ್ದ ನಾಟಕಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಅವರನ್ನು ಗಲ್ಲಿಗೇರಿಸುವ ದೃಶ್ಯದ ಅಭ್ಯಾಸದಲ್ಲಿದ್ದಾಗ 10 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾಬತ್‌ ಗ್ರಾಮದಲ್ಲಿ ನಡೆದಿದೆ.

ಘಟನೆ ನಡೆದ ತಕ್ಷಣ, ಆ ಬಾಲಕನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದೇ, ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲೆಯ ಕುನರ್‌ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬತ್ ಗ್ರಾಮದ ನಿವಾಸಿ ಭೂರೆ ಸಿಂಗ್ ಅವರ ಪುತ್ರ ಶಿವಂ ಮೃತ ಬಾಲಕ. ಈತ ಇತರ ಮಕ್ಕಳೊಂದಿಗೆ ನಾಟಕದ ಅಭ್ಯಾಸ ಮಾಡುತ್ತಿದ್ದ. ನಾಟಕದಲ್ಲಿ ಭಗತ್‌ಸಿಂಗ್‌ರನ್ನು ಗಲ್ಲಿಗೇರಿಸುವ ದೃಶ್ಯ ಅಭ್ಯಾಸ ಮಾಡುತ್ತಿದ್ದಾಗ, ಶಿವಂ ಕುತ್ತಿಗೆಗೆ ಹಗ್ಗದ ಕುಣಿಕೆ ಹಾಕಿಕೊಂಡಿದ್ದಾನೆ. ಆದರೆ, ಆತ ನಿಂತಿದ್ದ ಸ್ಟೂಲ್ ಜಾರಿತು ಎಂದು ಸ್ಥಳೀಯರು ಘಟನೆಯನ್ನು ವಿವರಿಸಿದ್ದಾರೆ

ADVERTISEMENT

ಈ ಘಟನೆಯಿಂದ ಗಾಬರಿಗೊಂಡ ಬೇರೆ ಮಕ್ಕಳು ಸಹಾಯಕ್ಕಾಗಿ ಕಿರುಚಿಕೊಂಡರು. ನಂತರ ಕೆಲವು ಸ್ಥಳೀಯ ನಿವಾಸಿಗಳು ಅಲ್ಲಿಗೆ ಬಂದು ಕುಣಿಕೆ ಕತ್ತರಿಸಿ ಶಿವಂನನ್ನು ಕೆಳಕ್ಕಿಳಿಸಿದರು. ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕುನ್‌ರಗಾಂವ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ನೇತೃತ್ವದ ತಂಡ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿತ್ತು. ಆದರೆ ಬಾಲಕ ಹೇಗೆ ಸಾವಿಗೀಡಾದ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ಕುಟುಂಬದ ಸದಸ್ಯರು ನಿರಾಕರಿಸಿದ್ದಾರೆ ಎಂದು ಎಸ್‌ಎಸ್‌ಪಿ ಬದೌನ್, ಸಂಕಲ್ಪ್ ಶರ್ಮಾ ಹೇಳಿದರು. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.