ADVERTISEMENT

Recovery of Cash | ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ‘ನಗದು ಪತ್ತೆ’

ಪಿಟಿಐ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ಪಿಟಿಐ ಚಿತ್ರ

ವದೆಹಲಿ : ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎನ್ನಲಾದ ಪ್ರಕರಣವು ಶುಕ್ರವಾರ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿತು.

ADVERTISEMENT

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸಿ ಈ ವಿಷಯದ ಬಗ್ಗೆ ರಚನಾತ್ಮಕ ಚರ್ಚೆ ನಡೆಸಲು ಕಾರ್ಯವಿಧಾನವೊಂದನ್ನು ಕಂಡುಕೊಳ್ಳುವುದಾಗಿ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್ ಅವರು ಹೇಳಿದರು.

ಬೆಳಿಗ್ಗೆಯ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಜೈರಾಮ್‌ ರಮೇಶ್‌, ‘ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾದ ಆಘಾತಕಾರಿ ಘಟನೆಯ ಬಗ್ಗೆ ನಾವು ಓದಿದ್ದೇವೆ’ ಎಂದರು.

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಂಸತ್‌ನ 50 ಸದಸ್ಯರು ಈ ಹಿಂದೆ ಸಭಾಪತಿಗೆ ನೋಟಿಸ್ ಸಲ್ಲಿಸಿದ್ದರು ಎಂಬುದನ್ನೂ ಅವರು ನೆನಪಿಸಿದರು. ನ್ಯಾಯಾಂಗದ ಉತ್ತರದಾಯಿತ್ವದ ಬಗ್ಗೆ ಸಭಾಪತಿ ಈ ಹಿಂದೆ ಹಲವು ಸಲ ಮಾತನಾಡಿದ್ದಾರೆ ಎಂದು ಹೇಳಿದರು.

‘ದಯವಿಟ್ಟು ಈ ಬಗ್ಗೆ ನೀವು ಮಾತನಾಡಬೇಕು. ನ್ಯಾಯಾಂಗದ ಉತ್ತರದಾಯಿತ್ವ ಹೆಚ್ಚಿಸುವ ಕುರಿತ ಪ್ರಸ್ತಾಪವನ್ನು ಮಂಡಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ವಿನಂತಿಸುತ್ತೇನೆ’ ಎಂದರು.

ನಗದು ಪತ್ತೆಯಾಗಿದೆ ಎನ್ನಲಾದ ವಿಷಯದ ಬಗ್ಗೆ ಮಾತನಾಡಿದ ಧನಕರ್, ಘಟನೆ ನಡೆದಿದ್ದರೂ ಅದು ತಕ್ಷಣ ಬೆಳಕಿಗೆ ಬಾರದಿರುವುದು ‘ಚಿಂತೆ’ ಉಂಟುಮಾಡಿದೆ ಎಂದರು. 

‘ಅಂತಹ ಘಟನೆಯು ರಾಜಕಾರಣಿ, ಅಧಿಕಾರಿ ಅಥವಾ ಯಾವುದೋ ಉದ್ಯಮಿಗೆ ಸಂಬಂಧಿಸಿದ್ದಾಗಿದ್ದರೆ ಸಂಬಂಧಪಟ್ಟ ವ್ಯಕ್ತಿ ತಕ್ಷಣವೇ ಎಲ್ಲರ ‘ಗುರಿ’ಯಾಗುತ್ತಿದ್ದರು’ ಎಂದು ಹೇಳಿದರು. 

ಇ.ಡಿ ಗಿಂತಲೂ ಒಳ್ಳೆಯ ಕೆಲಸ:

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ‘ಹಣ ಪತ್ತೆ ಮಾಡುವ ಮೂಲಕ ಅಗ್ನಿಶಾಮಕ ದಳವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐಗಿಂತ ಒಳ್ಳೆಯ ಕೆಲಸ ಮಾಡಿದೆ’ ಎಂದಿದ್ದಾರೆ.

‘ನ್ಯಾಯಮೂರ್ತಿ ವರ್ಮಾ ಅವರು ಉನ್ನಾವೊ ಅತ್ಯಾಚಾರ ಪ್ರಕರಣ ಮತ್ತು ಇತರ ಹಲವು ಗಂಭೀರ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರು. ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು, ಅದು ಯಾರ ಹಣ ಮತ್ತು ಅದನ್ನು ನ್ಯಾಯಮೂರ್ತಿಗಳಿಗೆ ಏಕೆ ನೀಡಲಾಯಿತು ಎಂಬುದನ್ನು ಪತ್ತೆಹಚ್ಚುವುದು ಮುಖ್ಯ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.

ಇದೊಂದು ಗಂಭೀರ ವಿಷಯ. ಕೇವಲ ನ್ಯಾಯಮೂರ್ತಿಗಳ ವರ್ಗಾವಣೆಯಿಂದ ಈ ವಿವಾದವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ
ಪವನ್‌ ಖೇರಾ, ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ

ಆಘಾತ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ

ನೋಟು ಪತ್ತೆಯಾಗಿದೆ ಎನ್ನಲಾದ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರು ಆಘಾತ ವ್ಯಕ್ತಪಡಿಸಿದ್ದಾರೆ. 

ಈ ಘಟನೆಯಿಂದ ತಾವು ಮತ್ತು ಇತರ ಹಲವು ವಕೀಲರು ಆಘಾತಕ್ಕೊಳಗಾಗಿರುವುದಾಗಿ ಹಿರಿಯ ವಕೀಲರೊಬ್ಬರು ಹೇಳಿದಾಗ ಮುಖ್ಯ ನ್ಯಾಯಮೂರ್ತಿ, ‘ಎಲ್ಲರ ಹಾಗೆ ನಮಗೂ ಈ ಬಗ್ಗೆ ಅರಿವಿದೆ’
ಎಂದು ಪ್ರತಿಕ್ರಿಯೆ ನೀಡಿದ್ದಾರೆ.

‘ಈ ಘಟನೆಯು ನಮಗೆ ತುಂಬಾ ನೋವುಂಟು ಮಾಡಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಾಪಾಡಿಕೊಳ್ಳಲು ದಯವಿಟ್ಟು ನಿಮ್ಮ ಕಡೆಯಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಹಿರಿಯ ವಕೀಲ ಅರುಣ್‌ ಭಾರದ್ವಾಜ್‌ ಅವರು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್‌ ರಾವ್‌ ಗೆಡೆಲಾ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.

‘ಅಲಹಾಬಾದ್‌ ಹೈಕೋರ್ಟ್ ಕಸದ ಬುಟ್ಟಿ ಅಲ್ಲ’

ಪ್ರಯಾಗರಾಜ್: ‘ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ಮತ್ತೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ ನಿರ್ಧರಿಸಿರುವುದು ನಮಗೆ ಅಚ್ಚರಿ ತಂದಿದೆ’ ಎಂದು ಅಲಹಾಬಾದ್ ಹೈಕೋರ್ಟ್‌ ವಕೀಲರ ಸಂಘ ಪ್ರತಿಕ್ರಿಯಿಸಿದೆ.

ಯಶವಂತ್‌ ಅವರ ವರ್ಗಾವಣೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಕೀಲರ ಸಂಘವು ನಿರ್ಣಯ ಹೊರಡಿಸಿದೆ. ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ಅನಿಲ್‌ ತಿವಾರಿ ಅವರು ಸಹಿ ಮಾಡಿರುವ ನಿರ್ಣಯದಲ್ಲಿ, ‘ನ್ಯಾಯಮೂರ್ತಿಗಳ ಮನೆಯಲ್ಲಿ ಸಿಕ್ಕಿರುವ ಹಣ ₹15 ಕೋಟಿ’ ಎಂಬ ಅಂಶವೂ ಇದೆ.

‘ಈ ಘಟನೆಯ ಬೆನ್ನಲ್ಲೇ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಕೊಲಿಜಿಯಂ ಸರ್ವಾನುಮತದಿಂದ ನಿರ್ಧರಿಸಿದೆ. ಕೊಲಿಜಿಯಂ ನಿರ್ಧಾರವು ಅಲಹಾಬಾದ್‌ ಹೈಕೋರ್ಟ್‌ ಎಂದರೆ 'ಕಸದ ಬುಟ್ಟಿಯೇ' ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.