ADVERTISEMENT

ಸೋಮನಾಥ ದೇಗುಲ ಪುನರ್ನಿರ್ಮಾಣದಿಂದ ದೇಶಕ್ಕೆ ಸಾಂಸ್ಕೃತಿಕ ಸ್ವಾತಂತ್ರ್ಯ: ಮೋದಿ

ಜೀರ್ಣೋದ್ಧಾರಗೊಂಡ ಪಾವಾಗಢದ ಕಾಳಿಕಾಮಾತೆ ದೇವಸ್ಥಾನ ಉದ್ಘಾಟನೆ

ಪಿಟಿಐ
Published 18 ಜೂನ್ 2022, 12:36 IST
Last Updated 18 ಜೂನ್ 2022, 12:36 IST
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಪಾವಾಗಢದಲ್ಲಿ ಜೀರ್ಣೋದ್ಧಾರಗೊಳಿಸಿರುವ ಕಾಳಿಕಾ ಮಾತಾ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಪಾವಾಗಢದಲ್ಲಿ ಜೀರ್ಣೋದ್ಧಾರಗೊಳಿಸಿರುವ ಕಾಳಿಕಾ ಮಾತಾ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ   

ಅಹಮದಾಬಾದ್‌: ‘ಸರ್ದಾರ ವಲ್ಲಭಬಾಯಿ ಪಟೇಲ್ ಅವರು ಸೋಮನಾಥ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿದರು. ಅದರೊಂದಿಗೆ ದೇಶಕ್ಕೆ ಸಾಂಸ್ಕೃತಿಕ ಸ್ವಾತಂತ್ರ್ಯ ಲಭಿಸಿದಂತಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಜೀರ್ಣೋದ್ಧಾರಗೊಳಿಸಿರುವ, ಪಂಚಮಹಲ್ ಜಿಲ್ಲೆಯ ಪಾವಾಗಢದಲ್ಲಿರುವ ಕಾಳಿಕಾ ಮಾತಾ ದೇವಸ್ಥಾನ ಉದ್ಘಾಟಿಸಿ, ದೇಗುಲದ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.

‘ಕಾಳಿಕಾ ಮಾತೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೂಡ ಇದೇ ಸಾಲಿಗೆ ಸೇರುತ್ತದೆ’ ಎಂದರು.

ADVERTISEMENT

‘ಗುಜರಾತ್‌ ಸ್ವಾಭಿಮಾನ’ವನ್ನು ಪ್ರಸ್ತಾಪಿಸಿದ ಪ್ರಧಾನಿ, ‘ಸೋಮನಾಥ ದೇವಸ್ಥಾನವಲ್ಲದೇ, ಪಂಚಮಹಲ್‌ ಹಾಗೂ ಪಾವಾಗಢಗಳು ಸಹ ಗುಜರಾತಿನ ಸ್ವಾಭಿಮಾನದ ಪರಂಪರೆಯ ಪ್ರತೀಕಗಳಾಗಿವೆ. ದೇಶದ ವಾಣಿಜ್ಯ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಮುಂದಾಳತ್ವವನ್ನು ಸಹ ಗುಜರಾತ್‌ ವಹಿಸಿಕೊಂಡಿದೆ’ ಎಂದರು.

ರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಧಾಮ ಅಭಿವೃದ್ಧಿ ಹಾಗೂ ಉತ್ತರಾಖಂಡದ ಕೇದಾರ ಧಾಮವನ್ನು ಸಹ ಪ್ರಸ್ತಾಪಿಸಿ, ‘ಪ್ರಾಚೀನ ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ನವಭಾರತವು ಪ್ರಾಚೀನ ಅಸ್ಮಿತೆ ಹಾಗೂ ಆಧುನಿಕ ಆಶೋತ್ತರಗಳ ಹೆಮ್ಮೆಯೊಂದಿಗೆ ಹೆಜ್ಜೆ ಹಾಕುತ್ತಿದೆ’ ಎಂದರು.

ವರ್ಷಾಂತ್ಯಕ್ಕೆ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ, ಮೋದಿ ಅವರು ತವರು ರಾಜ್ಯಕ್ಕೆ ನೀಡುತ್ತಿರುವ ಐದನೇ ಭೇಟಿ ಇದಾಗಿದೆ.

ಬಗೆಹರಿದ ವಿವಾದ: 15ನೇ ಶತಮಾನದಲ್ಲಿದ್ದ ಆಡಳಿತಗಾರ ಮಹಮೂದ್‌ ಬೇಗ್ಡಾ, ಕಾಳಿಕಾ ಮಾತೆ ದೇವಸ್ಥಾನವನ್ನು ಧ್ವಂಸಗೊಳಿಸಿದ್ದ ಎನ್ನಲಾಗಿದೆ. ನಂತರ ಈ ಸ್ಥಳದಲ್ಲಿ ದರ್ಗಾ ನಿರ್ಮಿಸಲಾಗಿತ್ತು. ಈ ಕಾರಣದಿಂದಾಗಿ ವಿವಾದ ಸೃಷ್ಟಿಯಾಗಿತ್ತು. ಈಗ ವಿವಾದವನ್ನು ಈಗ ಸೌಹಾರ್ದಯುತವಾಗಿ ಬಗೆಹರಿಸಲಾಗಿದ್ದು, ದರ್ಗಾವನ್ನು ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.