ದೆಹಲಿ ಹೈಕೋರ್ಟ್
ನವದೆಹಲಿ: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಲೈಂಗಿಕ ಅಪರಾಧ ಕೃತ್ಯಗಳ ಸಂತ್ರಸ್ತರಿಗೆ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸುವಂತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಆ ಸಂತ್ರಸ್ತರಿಗೆ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡಬೇಕು, ಇಲ್ಲದಿದ್ದರೆ ಕ್ರಿಮಿನಲ್ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.
ತುರ್ತು ಚಿಕಿತ್ಸೆಗಾಗಿ ಇಂತಹ ಸಂತ್ರಸ್ತರನ್ನು ಕರೆತಂದಾಗ ಆಸ್ಪತ್ರೆಗಳು ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸುತ್ತ ಇರಬಾರದು ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಅಮಿತ್ ಶರ್ಮ ಅವರು ಇರುವ ವಿಭಾಗೀಯ ಪೀಠವು ಹೇಳಿದೆ. ವೈದ್ಯಕೀಯ ವೃತ್ತಿಯಲ್ಲಿರುವ ಯಾವುದೇ ವ್ಯಕ್ತಿಯು ಇಂತಹ ಸಂತ್ರಸ್ತರಿಗೆ ಅಗತ್ಯ ಚಿಕಿತ್ಸೆ ಒದಗಿಸಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧ, ಅದರ ಬಗ್ಗೆ ದೂರನ್ನು ಪೊಲೀಸರು ತಕ್ಷಣವೇ ದಾಖಲಿಸಿಕೊಳ್ಳಬೇಕು ಎಂದು ಪೀಠವು ಹೇಳಿದೆ.
ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತರು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವ ಬಾಲಕ, ಬಾಲಕಿಯರ ವಿಚಾರವಾಗಿ ಪೀಠವು ಈ ಆದೇಶ ನೀಡಿದೆ. ಕಾನೂನು ಜಾರಿಯಲ್ಲಿ ಇದ್ದರೂ ಈ ಸಂತ್ರಸ್ತರು ಉಚಿತ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದೆ.
‘ಇಲ್ಲಿ ಹೇಳಿರುವ ಅಪರಾಧ ಕೃತ್ಯಗಳ ಸಂತ್ರಸ್ತರು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ, ಚಿಕಿತ್ಸಾ ಕೇಂದ್ರ, ರೋಗಪತ್ತೆ ಕೇಂದ್ರಕ್ಕೆ ಬಂದಾಗ ಅವರಿಗೆ ಉಚಿತ ಚಿಕಿತ್ಸೆ ಒದಗಿಸದೆ ಹಿಂದಕ್ಕೆ ಕಳುಹಿಸುವಂತಿಲ್ಲ’ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಚಿಕಿತ್ಸೆ ಅಂದರೆ ಪ್ರಥಮಚಿಕಿತ್ಸೆ ಮಾತ್ರವೇ ಅಲ್ಲ, ಅದು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದು, ಹೊರರೋಗಿಗಳಿಗೆ ನೆರವು ಮುಂದುವರಿಸುವುದು, ವಿವಿಧ ತಪಾಸಣೆಗಳು, ಪ್ರಯೋಗಾಲಯದಲ್ಲಿ ನಡೆಸಬೇಕಿರುವ ಪರೀಕ್ಷೆಗಳು, ಆಪ್ತಸಮಾಲೋಚನೆ ನಡೆಸುವುದು, ಮನಃಶಾಸ್ತ್ರದ ನೆಲೆಯಲ್ಲಿ ನೆರವು ಒದಗಿಸುವುದು, ಕುಟುಂಬದ ಸದಸ್ಯರಿಗೆ ಆಪ್ತಸಮಾಲೋಚನೆ ನಡೆಸುವುದು ಕೂಡ ಸೇರಿದೆ ಎಂದು ಪೀಠವು ಹೇಳಿದೆ.
ಸಂತ್ರಸ್ತರು ಉಚಿತ ಚಿಕಿತ್ಸೆ ಪಡೆಯಲು ರಾಜ್ಯ ಅಥವಾ ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸು ಇರಬೇಕು ಎಂದೇನೂ ಇಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ. ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ ಎಂಬ ಫಲಕವನ್ನು ಆಸ್ಪತ್ರೆಗಳು ತಮ್ಮ ಪ್ರವೇಶದ್ವಾರದಲ್ಲಿ ಹಾಗೂ ಸ್ವಾಗತಕಾರರು ಕುಳಿತಿರುವಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.