ADVERTISEMENT

ಬಿಜೆಪಿ ವಿರುದ್ಧ ಹೋರಾಟ: ಪ್ರಾದೇಶಿಕ ಪಕ್ಷಗಳೇ ಪ್ರಮುಖ- ಅಖಿಲೇಶ್‌ ಯಾದವ್‌

ಪಿಟಿಐ
Published 19 ಮಾರ್ಚ್ 2023, 11:08 IST
Last Updated 19 ಮಾರ್ಚ್ 2023, 11:08 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಕೋಲ್ಕತ್ತ (ಪಿಟಿಐ): ‘ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡುವಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಪಾತ್ರವಹಿಸಲಿವೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾನುವಾರ ಅಭಿಪ್ರಾಯಪಟ್ಟರು.

ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ‘ನಿತೀಶ್‌ ಕುಮಾರ್‌, ಕೆ. ಚಂದ್ರಶೇಖರ ರಾವ್‌, ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಮೈತ್ರಿಕೂಟ ರಚಿಸುವಲ್ಲಿ ಅವರದ್ದೇ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮೈತ್ರಿಕೂಟದಲ್ಲಿ ಭಾಗಿಯಾಗುವುದು ಬಿಡುವುದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ’ ಎಂದೂ ಹೇಳಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಅನ್ನು ಒಂದೇ ತಕ್ಕಡಿಯಲ್ಲಿಡುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ‌ಗೆ ಹೋಲಿಸಿದರೆ, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಸ್ತಿತ್ವದಲ್ಲಿಲ್ಲ. ಅಲ್ಲೆಲ್ಲಾ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ಧ ಶತಾಯಗತಾಯ ಹೋರಾಟ ನಡೆಸುತ್ತಿವೆ. ಈ ಹೋರಾಟದಲ್ಲಿ ಪ್ರಾದೇಶಿಕ ಪಕ್ಷಗಳು ಜಯಶಾಲಿಯಾಗಲಿವೆ ಎನ್ನುವ ವಿಶ್ವಾಸ ಇದೆ’ ಎಂದರು.

ADVERTISEMENT

‘2024ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು ಎಂದಾದರೆ, ಬಿಜೆಪಿಯು ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಆದರೆ, ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗೆಲ್ಲದಂತೆ ನಾವು ಮಾಡುತ್ತೇವೆ’ ಎಂದರು.

‘ಕಾಂಗ್ರೆಸ್‌ನಂತೆ ಬಿಜೆಪಿ ಕಥೆಯೂ ಮುಗಿಯುತ್ತದೆ’

‘ವಿರೋಧ ಪಕ್ಷಗಳ ವಿರುದ್ಧ ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ‘ದುರ್ಬಳಕೆ’ ಮಾಡಿಕೊಳ್ಳುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬಿಜೆಪಿ ನಿರ್ನಾಮವಾಗಲಿದೆ. ಈ ಹಿಂದೆ ಕಾಂಗ್ರೆಸ್‌ ಕೂಡ ಹೀಗೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿತ್ತು. ಈಗ ಅದರ ಕಥೆ ಮುಗಿದಿದೆ’ ಎಂದು ಅಖಿಲೇಶ್‌ ಯಾದವ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.