ADVERTISEMENT

ಪತ್ರಕರ್ತ ಸಿದ್ದಿಕಿ ಕಪ್ಪನ್ ಶೀಘ್ರ ಬಿಡುಗಡೆಗೆ ಒತ್ತಾಯ

ಕೇರಳ ಕಾರ್ಯನಿರತ ಪತ್ರಕರ್ತರ ಸಂಘದಿಂದ ಯೋಗಿ ಆದಿತ್ಯನಾಥ್‌ಗೆ ಪತ್ರ

ಪಿಟಿಐ
Published 6 ಅಕ್ಟೋಬರ್ 2020, 11:21 IST
Last Updated 6 ಅಕ್ಟೋಬರ್ 2020, 11:21 IST

ತಿರುವನಂತಪುರ: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆಯ ಮೇಲೆ ಬಂಧಿಸಿರುವ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೇರಳ ಕಾರ್ಯನಿರತರ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ದೆಹಲಿ ಘಟಕವು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದೆ.

‘ಹಿರಿಯ ಪತ್ರಕರ್ತ ಸಿದ್ದಿಕಿ ಕಪ್ಪನ್ azhimukham.com ಸೇರಿದಂತೆ ದೆಹಲಿ ಘಟಕದ ಹಲವು ಮಲಯಾಳಂ ಪತ್ರಿಕೆಗಳಿಗೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಸಂಘದ ಕಾರ್ಯದರ್ಶಿ. ಉತ್ತರ ಪ್ರದೇಶದ ‘ಹಾಥರಸ್‌ ಪರಿಸ್ಥಿತಿ’ಯನ್ನು ವರದಿ ಮಾಡಲು ತೆರಳುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ಕರ್ತವ್ಯನಿರ್ವಹಿಸಲು ಹಾಥರಸ್‌ಗೆ ತೆರಳುತ್ತಿದ್ದರು. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಸಂಘದ ಅಧ್ಯಕ್ಷ ಮಿಜೊ ಜೋಸ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಸಿದ್ದಿಕಿ ಅವರು ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ನಂತರ ಹಾಥರಸ್‌ ಪರಿಸ್ಥಿತಿ ಕುರಿತು ವರದಿ ಮಾಡುವುದಕ್ಕಾಗಿ ಸೋಮವಾರ ಅಲ್ಲಿಗೆ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ದೆಹಲಿಯ ವಕೀಲರ ಮೂಲಕ, ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಪ್ರಯೋಜನವಾಗಲಿಲ್ಲ. ಉತ್ತರ ಪ್ರದೇಶ ಪೊಲೀಸರೂ ಕೂಡ ಸಿದ್ದಿಕಿಯವರ ಬಗ್ಗೆ ಏನೂ ಮಾಹಿತಿ ನೀಡುತ್ತಿಲ್ಲ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.