ADVERTISEMENT

ಕೋವಿಡ್ ಔಷಧ ರೆಮ್‌ಡಿಸಿವಿರ್ ಬೆಲೆ ಇಳಿಕೆ ಘೋಷಿಸಿದ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2021, 13:11 IST
Last Updated 16 ಏಪ್ರಿಲ್ 2021, 13:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್ ಪೀಡಿತರ ಚಿಕಿತ್ಸೆಗೆ ಬಳಸುವ 'ರೆಮ್‌ಡಿಸಿವಿರ್' ಔಷಧಿಯ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

‘ಸರ್ಕಾರದ ಮಧ್ಯಪ್ರವೇಶದಿಂದಾಗಿ 'ರೆಮ್‌ಡಿಸಿವಿರ್' ಬೆಲೆಯನ್ನು ಉತ್ಪಾದಕರು ಏಪ್ರಿಲ್ 15ರಿಂದ ಅನ್ವಯವಾಗುವಂತೆ ₹5,400ರಿಂದ ₹3,500ಕ್ಕೆ ಇಳಿಕೆ ಮಾಡಿದ್ದಾರೆ. ಇದರಿಂದ ಕೋವಿಡ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ಬೆಂಬಲ ದೊರೆಯಲಿದೆ’ ಎಂದು ಟ್ವೀಟ್‌ನಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.

ಏಪ್ರಿಲ್ 11ರಿಂದ 'ರೆಮ್‌ಡಿಸಿವಿರ್' ರಫ್ತು ನಿಷೇಧ ಜಾರಿಯಲ್ಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲಾಗಿದೆ. 4 ಲಕ್ಷ ಬಾಟಲ್‌ಗಳಷ್ಟು ರಫ್ತನ್ನು ಸ್ಥಗಿತಗೊಳಿಸಿ ದೇಶೀಯ ಅಗತ್ಯಗಳನ್ನು ಪೂರೈಸಲು ಬಳಸಲಾಗಿದೆ. ಇಒಯು/ಎಸ್‌ಇಝಡ್ ಘಟಕಗಳನ್ನೂ ದೇಶೀಯ ಮಾರುಕಟ್ಟೆಯ ಅಗತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.

ಔಷಧ ಇಲಾಖೆ ಮತ್ತು ರಾಷ್ಟ್ರೀಯ ಔಷಧ ದರ ಪ್ರಾಧಿಕಾರವು (ಎನ್‌ಪಿಪಿಎ) 'ರೆಮ್‌ಡಿಸಿವಿರ್' ಉತ್ಪಾದನೆ ಮೇಲೆ ನಿರಂತರ ನಿಗಾ ಇರಿಸಿದೆ. ಕಳೆದ ವಾರದಿಂದ ಅನ್ವಯವಾಗುವಂತೆ ತಿಂಗಳ ಉತ್ಪಾದನೆಯನ್ನು 28 ಲಕ್ಷ ಬಾಟಲ್‌ಗಳಿಂದ 41 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದೂ ಸದಾನಂದ ಗೌಡ ಮಾಹಿತಿ ನೀಡಿದ್ದಾರೆ.

ಕಳೆದ 5 ದಿನಗಳಲ್ಲಿ 6.69 ಲಕ್ಷ ಬಾಟಲ್‌ಗಳಷ್ಟು 'ರೆಮ್‌ಡಿಸಿವಿರ್' ಅನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ದೊರೆಯುವಂತೆ ಮಾಡಲಾಗಿದೆ. ರಾಜ್ಯಗಳಿಗೆ ಸರಬರಾಜು ಹೆಚ್ಚಿಸಲಾಗಿದೆ. 'ರೆಮ್‌ಡಿಸಿವಿರ್' ಉತ್ಪಾದನೆ ಸೌಕರ್ಯ, ವೇಗ ಹಾಗೂ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಟ್ವೀಟ್‌ ಮೂಲಕ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.