ADVERTISEMENT

ರಸ್ತೆ ಅಪಘಾತ: ಕರ್ನಾಟಕಕ್ಕೆ 4ನೇ ಸ್ಥಾನ

40 ನಗರಗಳ ಮಾಹಿತಿ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 20:00 IST
Last Updated 19 ನವೆಂಬರ್ 2019, 20:00 IST
   

ನವದೆಹಲಿ: ಕಳೆದ ವರ್ಷ ದೇಶದಾದ್ಯಂತ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿರುವ ಅಗ್ರ ಐದು ರಾಜ್ಯಗಳ ಪೈಕಿ ಕರ್ನಾಟಕವು 4ನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾದ ದೇಶದ ಪ್ರಮುಖ ನಗರಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯದ ಸಂಶೋಧನಾ ವಿಭಾಗವು ದೇಶದಾದ್ಯಂತ 2018ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಕುರಿತು ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಅಂಶಗಳಿವೆ.

ಈ ವರದಿಯ ಪ್ರಕಾರ, 2017ನೇ ಸಾಲಿಗೆ ಹೋಲಿಸಿದರೆ ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.

ADVERTISEMENT

2017ರಲ್ಲಿ ರಾಜ್ಯದಾದ್ಯಂತ 42,542 ಅಪಘಾತ ಪ್ರಕರಣಗಳು ದಾಖಲಾಗಿದ್ದರೆ, 2018ರ ಪ್ರಮಾಣ 41,707. ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಾವಿನ ಪ್ರಮಾಣ ಮಾತ್ರ ಹೆಚ್ಚಿದೆ. 2017ರಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯು 10,609 ಆಗಿದ್ದರೆ, 2018ರ ಸಾವಿನ ಸಂಖ್ಯೆ 10,999.

ಅತಿ ಹೆಚ್ಚು ಅಪಘಾತಗಳು ಸಂಭವಿಸಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಅಲ್ಲಿ ಸಂಭವಿಸಿರುವ 63,920 ಅಪಘಾತಗಳಲ್ಲಿ 65,502 ಜನ ಸಾವಿಗೀಡಾಗಿದ್ದಾರೆ.

10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ದೇಶದ 40 ನಗರಗಳ ಪೈಕಿ ಅಪಘಾತದ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿರುವ ಬೆಂಗಳೂರು, ಸಾವು– ನೋವುಗಳ ಸಂಖ್ಯೆಯಲ್ಲಿ 5ನೇ ಸ್ಥಾನ ಪಡೆದಿದೆ.

2017ರಲ್ಲಿ 2,297 ಅಪಘಾತ ಪ್ರಕರಣಗಳು ದಾಖಲಾಗಿದ್ದ ಬೆಂಗಳೂರಿನಲ್ಲಿ ಕಳೆದ ವರ್ಷದ ಸಂಖ್ಯೆ 4,611. ಈ ಎರಡೂ ವರ್ಷಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆಯೂ ಕ್ರಮವಾಗಿ 653ರಿಂದ 686ಕ್ಕೆ ಹೆಚ್ಚಿದೆ.

ಅಪಘಾತಗಳ ಸಂಖ್ಯೆಯ ಪಟ್ಟಿಯಲ್ಲಿ ಚೆನ್ನೈನ ನಂತರದ ಸ್ಥಾನಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಹಾಗೂ ಭೋಪಾಲ, ಇಂದೋರ್‌ ನಗರಗಳಿವೆ. ಹೆಚ್ಚು ಸಾವು– ನೋವು ಸಂಭವಿಸಿರುವ ನಗರಗಳಲ್ಲಿ ದೆಹಲಿ ಅಗ್ರ ಸ್ಥಾನದಲ್ಲಿದ್ದರೆ ಚೆನ್ನೈ, ಕಾನ್‌ಪುರ ಮತ್ತು ಜೈಪುರ ನಗರಗಳು ನಂತರದ ಸ್ಥಾನದಲ್ಲಿವೆ.

2017ಕ್ಕೆ (4.64 ಲಕ್ಷ) ಹೋಲಿಸಿದರೆ ಕಳೆದ ವರ್ಷ ದೇಶದಾದ್ಯಂತ ಸಂಭವಿಸಿರುವ ಅಪಘಾತಗಳ ಸಂಖ್ಯೆ ಶೇ 0.46ರಷ್ಟು ಹೆಚ್ಚಿದ್ದು, 4.67 ಲಕ್ಷ ತಲುಪಿದೆ. ಸಾವು– ನೋವುಗಳ ಸಂಖ್ಯೆಯೂ ಶೇ 2.37ರಷ್ಟು ಹೆಚ್ಚಿದೆ. 2017ರಲ್ಲಿ ಅಪಘಾತಗಳಲ್ಲಿ ಮೃತರಾದವರ ಸಂಖ್ಯೆ 1.47 ಲಕ್ಷ ಇದ್ದರೆ, ಕಳೆದ ವರ್ಷ ದಾಖಲಾಗಿರುವ ಸಂಖ್ಯೆ 1.51 ಲಕ್ಷ.

ಸಾವಿಗೆ ಕಾರಣಗಳು
* ಅತಿಯಾದ ವೇಗ
* ಚಾಲನೆಯ ಸಂದರ್ಭ ಮೊಬೈಲ್‌ ಬಳಕೆ
* ಹೆಲ್ಮೆಟ್‌ ಧರಿಸದಿರುವುದು
* ಮದ್ಯ ಸೇವಿಸಿ ಚಾಲನೆ
* ಸೀಟ್‌ ಬೆಲ್ಟ್‌ ಧರಿಸದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.