ADVERTISEMENT

ಗಣರಾಜ್ಯೋತ್ಸವ: ಜಗತ್ತಿನ ವಿವಿಧೆಡೆ ಹಾರಾಡಿದ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:23 IST
Last Updated 26 ಜನವರಿ 2026, 15:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀಜಿಂಗ್‌/ವಾಷಿಂಗ್ಟನ್‌: ವಿಶ್ವದ ವಿವಿಧೆಡೆ ಭಾರತೀಯರು ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ವಿದೇಶಗಳಲ್ಲಿನ ಭಾರತದ ರಾಯಭಾರ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು. 

ಅಧಿಕಾರಿಗಳು, ಸಿಬ್ಬಂದಿ, ಅನಿವಾಸಿ ಭಾರತೀಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡರು. ವಂದೇ ಮಾತರಂ, ಭಾರತ್‌ ಮಾತಾ ಕಿ ಜೈ ಘೋಷಣೆಗಳು ಪ್ರತಿಧ್ವನಿಸಿದವು. 

ADVERTISEMENT

ಬೀಜಿಂಗ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ‘ವಂದೇ ಮಾತರಂ’ ಇತಿಹಾಸ ಸಾರುವ ವಿಷಯಾಧಾರಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಗೀತೆ ದೇಶವನ್ನು ಒಗ್ಗೂಡಿಸುವಲ್ಲಿ ಹೇಗೆ ಮಹತ್ವದ ಪಾತ್ರ ನಿರ್ವಹಿಸಿತು ಎಂಬುದನ್ನು ಎತ್ತಿ ತೋರಿಸಲಾಯಿತು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ವೇಳೆ ಜರುಗಿದವು. 

ವಿವಿಧ ನಾಯಕರ ಶುಭಾಶಯ:   

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್, ಭೂತಾನ್‌ ಪ್ರಧಾನಿ ಸೇರಿದಂತೆ ಜಾಗತಿಕ ನಾಯಕರು ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಅವರು ಭಾರತದ ಜತೆಗೆ ಸಂಬಂಧ ಮತ್ತು ಆಳವಾದ ಸ್ನೇಹವನ್ನು ಸ್ಮರಿಸಿದ್ದಾರೆ. 

‘77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಭಾರತದ ಜನರು ಮತ್ತು ಸರ್ಕಾರಕ್ಕೆ ಅಮೆರಿಕದ ಜನರ ಪರವಾಗಿ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಮೆರಿಕ ಮತ್ತು ಭಾರತವು ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಾಗಿದ್ದು, ಐತಿಹಾಸಿಕ ಬಾಂಧವ್ಯವನ್ನು ಹಂಚಿಕೊಳ್ಳುತ್ತವೆ’ ಎಂದು ಟ್ರಂಪ್‌ ಸಂದೇಶದಲ್ಲಿ ಹೇಳಿದ್ದಾರೆ.  

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚಿತ್ರವನ್ನು ‘ಎಕ್ಸ್‌’ನಲ್ಲಿ  ಹಂಚಿಕೊಂಡಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್, ‘2024ರಲ್ಲಿ ನಾವು ಒಟ್ಟಿಗೆ ಹಂಚಿಕೊಂಡ ಗಣರಾಜ್ಯೋತ್ಸವ ಅದ್ಭುತ ನೆನಪು!’ ಎಂದು ಹೇಳಿದ್ದಾರೆ. ಅಲ್ಲದೆ ‘ಆತ್ಮೀಯ ಗೆಳೆಯ ಮೋದಿ ಅವರಿಗೆ ಈ ಮಹಾನ್‌ ದಿನದ ಶುಭಾಶಯಗಳು, ಫೆಬ್ರುವರಿಯಲ್ಲಿ ಮತ್ತೆ ಭೇಟಿಯಾಗೋಣ’ ಎಂದಿದ್ದಾರೆ. 

ಭೂತಾನ್ ಪ್ರಧಾನಿ ಶೆರಿಂಗ್ ಟೊಬಗೆ ಅವರು, ಭಾರತ– ಭೂತಾನ್‌ ಸ್ನೇಹ ಶಾಶ್ವತವಾಗಿದ್ದು, ಅದು ಇನ್ನಷ್ಟು ಬಲಗೊಳ್ಳುತ್ತ ಸಾಗಬೇಕು ಎಂದು ಹಾರೈಸಿದ್ದಾರೆ.  

ಭಾರತ– ಅಮೆರಿಕ ಐತಿಹಾಸಿಕ ಬಾಂಧವ್ಯವನ್ನು ಹಂಚಿಕೊಂಡಿವೆ. ರಕ್ಷಣೆ ಇಂಧನ ನಿರ್ಣಾಯಕ ಖನಿಜಗಳು ಸೇರಿದಂತೆ ಅತ್ಯಾಧುನಿಕ ಮತ್ತು ನೂತನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿಕಟ ಸಹಕಾರ ಹೊಂದಿವೆ
– ಮಾರ್ಕೊ ರೂಬಿಯೊ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ