ADVERTISEMENT

5 ತಿಂಗಳ ವಿಚಾರಣೆ ಅಂತ್ಯ, ಬಡ್ತಿ ಮೀಸಲಾತಿ: ತೀರ್ಪು ಕಾದಿರಿಸಿದ ‘ಸುಪ್ರೀಂ’

ಸಿದ್ದಯ್ಯ ಹಿರೇಮಠ
Published 6 ಮಾರ್ಚ್ 2019, 18:55 IST
Last Updated 6 ಮಾರ್ಚ್ 2019, 18:55 IST
   

ನವದೆಹಲಿ: ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ರಾಜ್ಯ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಬುಧವಾರ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾದಿರಿಸಿತು.

ಅರ್ಜಿದಾರರಾದ ಪವಿತ್ರ ಪರ ವಕೀಲ ರಾಜೀವ್ ಧವನ್ ಅವರು ವಿಚಾರಣೆಯ ಕೊನೆಯ ದಿನ ಎರಡು ಗಂಟೆ ಕಾಲ ವಾದ ಮಂಡಿಸಿದ ಬಳಿಕ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ತೀರ್ಪನ್ನು ಕಾದಿರಿಸಿತು.

ಬುಧವಾರ ಧವನ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ 116 ಪುಟಗಳ ರಿಜಾಂಯ್ಡರ್‌ಗೆ, ಪ್ರಕರಣಕ್ಕೆ ಸಂಬಂಧಿಸಿದ ಇತರ ಅರ್ಜಿದಾರರು ಮುಂದಿನ ಬುಧವಾರದೊಳಗೆ ಲಿಖಿತ ಪ್ರತಿಕ್ರಿಯೆ ನೀಡಬಹುದು. ಮುಂದಿನ ಗುರುವಾರದೊಳಗೆ ಧವನ್‌ ಅವರು ಆ ಸಂಬಂಧ ಲಿಖಿತ ಪ್ರತಿಕ್ರಿಯೆ ನೀಡಬಹುದು ಎಂದು ನ್ಯಾಯಪೀಠ ತಿಳಿಸಿತು.

ADVERTISEMENT

ಈ ಮೂಲಕ ಕಳೆದ ಅಕ್ಟೋಬರ್ 23ರಂದು ಆರಂಭವಾಗಿದ್ದ ಸುದೀರ್ಘ ವಿಚಾರಣೆಗೆ ತೆರೆ ಬಿದ್ದಂತಾಯಿತು. ಮಾರ್ಚ್ ಅಂತ್ಯದೊಳಗೆ ನ್ಯಾಯಪೀಠ ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ.

ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿ 2017ರ ಫೆಬ್ರುವರಿ 9ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ನೂತನ ಜ್ಯೇಷ್ಠತಾ ಪಟ್ಟಿಯನ್ನು ಮೂರು ತಿಂಗಳೊಳಗೆ ಪರಿಷ್ಕರಿಸಿ ಸಿದ್ಧಪಡಿಸಬೇಕು ಎಂದು ಆದೇಶಿಸಿತ್ತು.

ಆದರೆ, ಕಾಯ್ದೆ ರದ್ದತಿಯಿಂದ ಹಿಂಬಡ್ತಿಯ ಅಪಾಯ ಎದುರಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ನೂತನ ಕಾಯ್ದೆ ಜಾರಿಗೊಳಿಸಿತ್ತು. ಈ ಕುರಿತು ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಕಳೆದ ಜುಲೈನಲ್ಲಿ ನಡೆದಿದ್ದ ಮುಂಗಾರು ಅಧಿವೇಶನದ ಸಂದರ್ಭ ನೂತನ ಕಾಯ್ದೆಗೆ ಅನುಮೋದನೆ ಪಡೆಯಲಾಗಿತ್ತು. ನಂತರ ರಾಷ್ಟ್ರಪತಿಯವರು ಕಾಯ್ದೆಗೆ ಅಂಕಿತ ಹಾಕಿದ್ದರು.

ಆದರೆ, 2017ರ ಫೆಬ್ರುವರಿ 9ರ ತೀರ್ಪನ್ನು ಜಾರಿಗೊಳಿಸದೆ ನ್ಯಾಯಾಂಗ ನಿಂದನೆ ಎಸಗಲಾಗಿದೆ ಎಂದು ದೂರಿದ್ದ ಮೇಲ್ಮನವಿ ಸಲ್ಲಿಕೆಯಾಗಿದ್ದರಿಂದ ಹಾಗೂ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆ ನಡೆದಿದ್ದರಿಂದ ಸರ್ಕಾರ ನೂತನ ಕಾಯ್ದೆ ಜಾರಿ ಮಾಡಿರಲಿಲ್ಲ.

ವಿಚಾರಣೆ ಸುದೀರ್ಘ ಅವಧಿಗೆ ಮುಂದುವರಿದಿದ್ದರಿಂದ ಕಳೆದ ಫೆಬ್ರುವರಿ 25ರಂದು ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದ್ದ ಸರ್ಕಾರ, ಫೆಬ್ರುವರಿ 27ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಮುಂಬಡ್ತಿಗೆ ಆದೇಶ ಹೊರಡಿಸಿತ್ತು.

ಈ ಆದೇಶವನ್ನೂ ಪ್ರಶ್ನಿಸಿದ್ದರಿಂದ ಮಾರ್ಚ್‌ 1ರಂದು ಸರ್ಕಾರದ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಮಾರ್ಚ್‌ 13ಕ್ಕೆ ಬದಲು, ಬುಧವಾರಕ್ಕೆ ನಿಗದಿಗೊಳಿಸಿದ ನ್ಯಾಯಪೀಠ, ಎರಡು ಅಥವಾ ಮೂರು ವಾರಗಳಲ್ಲಿ ತೀರ್ಪು ಹೊರ ಬೀಳಲಿದೆ ಎಂಬ ಸುಳಿವು ನೀಡಿತ್ತು.

ಯಥಾಸ್ಥಿತಿ ಮುಚ್ಚಳಿಕೆ:ನೂತನ ಕಾಯ್ದೆಯ ಜಾರಿಗೆ ಮುಂದಾಗದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂಬ ಮೌಖಿಕ ಭರವಸೆಯನ್ನು ಕಳೆದ ಜುಲೈ 27ರಂದು ನೀಡಿದ್ದ ರಾಜ್ಯ ಸರ್ಕಾರ, ನಂತರ ತನ್ನ ನಿರ್ಧಾರ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು.

ಏತನ್ಮಧ್ಯೆ, ಬಡ್ತಿಯಲ್ಲಿ ಮೀಸಲಾತಿ ಅನುಸರಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಎಂ.ನಾಗರಾಜ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನೀಡಲಾದ ತೀರ್ಪನ್ನು ಪ್ರಶ್ನಿಸಿ ಹಲವು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ‘ಕೆನೆಪದರ’ದ ಆಧಾರದಲ್ಲಿ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂಬ ಮಹತ್ವದ ತೀರ್ಪು ನೀಡಿತ್ತು.

ಕಾಯ್ದೆಯ ಅಗತ್ಯ, ಸಾಧಕ– ಬಾಧಕ ಮತ್ತು ಮಹತ್ವವನ್ನು ಪರಿಶೀಲಿಸುವ ನಿಟ್ಟಿನಲ್ಲಿ ನಡೆದ ವಿಚಾರಣೆಯ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ಇಂದಿರಾ ಜೈಸಿಂಗ್‌, ದಿನೇಶ್‌ ದ್ವಿವೇದಿ, ನಿದೇಶ್‌ ಗುಪ್ತಾ, ರಾಜ್ಯ ಸರ್ಕಾರದ ಪರ ಬಸವಪ್ರಭು ಪಾಟೀಲ, ಮುಕುಲ್‌ ರೋಹಟ್ಗಿ ವಾದ ಮಂಡಿಸಿದ್ದರು.

ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಹಿಂದುಳಿದಿರುವಿಕೆ, ಪ್ರಾತಿನಿಧ್ಯದ ಕೊರತೆ ಹಾಗೂ ದಕ್ಷತೆಯ ಮಾಹಿತಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಸೂಚಿಸಿದೆ. ಆದರೆ, ಈ ಬಗ್ಗೆ ಸ್ಪಷ್ಟತೆಯೇ ಇಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ವಕೀಲರಾದ ಇಂದಿರಾ ಜೈಸಿಂಗ್‌ ಒತ್ತಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.