ADVERTISEMENT

ಡಿಡಿಸಿ: ಗುಪ್ಕಾರ್ ಮೈತ್ರಿಕೂಟದ ಮೇಲುಗೈ, ಅತಿದೊಡ್ಡ ಪಕ್ಷವಾದ ಬಿಜೆಪಿ

276 ಕ್ಷೇತ್ರಗಳ ಫಲಿತಾಂಶ ಪ್ರಕಟ; ಎರಡು ಕ್ಷೇತ್ರಗಳ ಮತ ಎಣಿಕೆಗೆ ತಡೆ

ಪಿಟಿಐ
Published 23 ಡಿಸೆಂಬರ್ 2020, 6:09 IST
Last Updated 23 ಡಿಸೆಂಬರ್ 2020, 6:09 IST
ಜಮ್ಮುವಿನ ಡಿಡಿಸಿ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ವಿಜಯದ ನಗೆ ಬೀರಿದರು.
ಜಮ್ಮುವಿನ ಡಿಡಿಸಿ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ವಿಜಯದ ನಗೆ ಬೀರಿದರು.   

ಶ್ರೀನಗರ / ಜಮ್ಮು: ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮುವಿನಲ್ಲಿ ನಡೆಯುತ್ತಿರುವ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಮತ ಎಣಿಕೆ ನಡೆದಿದ್ದು, ಎನ್‌ಸಿ ಪಕ್ಷದ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ನೇತೃತ್ವದ ಗುಪ್ಕಾರ್ ಮೈತ್ರಿಕೂಟ (ಪೀಪಲ್ಸ್‌ ಅಲೈನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್‌–ಪಿಎಜಿಡಿ) ಮೇಲುಗೈ ಸಾಧಿಸಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಜಿಲ್ಲೆಯಲ್ಲಿರುವ 276 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಗುಪ್ಕಾರ್ ಒಕ್ಕೂಟ 110 ಮತ್ತು ಬಿಜೆಪಿ 74 ಸ್ಥಾನಗಳನ್ನು ಪಡೆದಿವೆ. ಉತ್ತರ ಕಾಶ್ಮೀರದಲ್ಲಿರುವ ಬಂಡಿಪೊರಾ ಮತ್ತು ಕುಪ್ವಾರ ಜಿಲ್ಲೆಗಳು ಮತ್ತು ಜಮ್ಮು ವಲಯದ ಪೂಂಚ್ ಮತ್ತು ರಜೌರಿ ಜಿಲ್ಲೆಗಳ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ.

ಒಟ್ಟು 280 ಡಿಡಿಸಿ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. 20 ಜಿಲ್ಲೆಗಳಲ್ಲಿ, ಪ್ರತಿ ಜಿಲ್ಲೆಯ 14 ಕ್ಷೇತ್ರಗಳಿಗೆ ನವೆಂಬರ್ 28ರಿಂದ ಡಿಸೆಂಬರ್ 19ರವರೆಗೆ ನಡೆದ ಎಂಟು ಹಂತಗಳ ಚುನಾವಣೆ ನಡೆಯಿತು. ಮಂಗಳವಾರ ಬೆಳಿಗ್ಗೆಯಿಂದ ಮತ ಎಣಿಕೆ ಕಾರ್ಯ ಆರಂಭವಾಯಿತು.

ADVERTISEMENT

ಕಳೆದ ವರ್ಷ 370ನೇ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ರಾಜ್ಯವನ್ನು ಪ್ರತ್ಯೇಕಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿಸಲಾಯಿತು. ಇದಾದ ನಂತರ ಮೊದಲ ಬಾರಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯೊಂದು ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಇಬ್ಬರು ಮಾಜಿ ಉಗ್ರರನ್ನು ವಿವಾಹವಾಗಿರುವ ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರು ಪ್ರಜೆಗಳು (ಪಿಒಕೆ) ಕುಪ್ವಾರಾದ ಡ್ರ್ಯಾಗ್ಮುಲ್ಲಾ ಕ್ಷೇತ್ರ ಮತ್ತು ಬಂಡಿಪೊರಾದ ಹಾಜಿನ್‌–ಎ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಮುಂದಿನ ಆದೇಶ ನೀಡುವವರೆಗೂ ಈ ಕ್ಷೇತ್ರಗಳ ಮತ ಎಣಿಕೆ ಕಾರ್ಯವನ್ನು ಮುಂದೂಡಲು ರಾಜ್ಯ ಚುನಾವಣಾ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ರಜೌರಿ ಜಿಲ್ಲೆಯ ದರ್ಹಾಲ್ ಕ್ಷೇತ್ರದಲ್ಲಿ ಬಿಜೆಪಿಯ ಮೊಹಮ್ಮದ್ ಇಕ್ಬಾಲ್ ಮಲಿಕ್ ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪರ್ವೇಜ್ ರಶೀದ್ ಅವರಿಗಿಂತ 1,000 ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ. ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಗುಪ್ಕಾರ್ ಮೈತ್ರಿ ಕೂಟ 6 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 3 ಮತ್ತು ಬಿಜೆಪಿ 2 ಸ್ಥಾನಗಳನ್ನು ಗೆದ್ದಿದ್ದರೆ, ಅಪ್ನಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದೊಂದು ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.