ADVERTISEMENT

ಬಾಲಕನಾಗಿದ್ದಾಗ ಅಪಹರಣವಾಗಿದ್ದವ 30 ವರ್ಷಗಳ ಬಳಿಕ ಮನೆಗೆ! ಕುಟುಂಬದಲ್ಲಿ ಸಂತಸ

ಬಾಲಕನಾಗಿದ್ದಾಗ ಮೂವತ್ತು ವರ್ಷಗಳ ಹಿಂದೆ ಪಾಲಕರಿಂದ ಬೇರ್ಪಟ್ಟು ಅಪಹರಣವಾಗಿದ್ದ ವ್ಯಕ್ತಿ ಈಗ ವಾಪಸ್ ಕುಟುಂಬವನ್ನು ಸೇರಿದ್ದಾರೆ.

ಪಿಟಿಐ
Published 30 ನವೆಂಬರ್ 2024, 3:15 IST
Last Updated 30 ನವೆಂಬರ್ 2024, 3:15 IST
<div class="paragraphs"><p>ತುಲಾ ರಾಜು</p></div>

ತುಲಾ ರಾಜು

   

ಗಾಜಿಯಾಬಾದ್, ಉತ್ತರ ಪ್ರದೇಶ: ಬಾಲಕನಾಗಿದ್ದಾಗ ಮೂವತ್ತು ವರ್ಷಗಳ ಹಿಂದೆ ಪಾಲಕರಿಂದ ಬೇರ್ಪಟ್ಟು ಅಪಹರಣವಾಗಿದ್ದ ವ್ಯಕ್ತಿ ಈಗ ವಾಪಸ್ ಕುಟುಂಬವನ್ನು ಸೇರಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ತುಲಾ ರಾಜು (38) ಎನ್ನುವ ವ್ಯಕ್ತಿ ತನ್ನ ಕುಟುಂಬವನ್ನು ಮರಳಿ ಸೇರಿದ್ದಕ್ಕೆ ಭಾವುಕನಾಗಿ ಕಣ್ಣೀರು ಸುರಿಸಿದ್ದಾರೆ.

ADVERTISEMENT

ಬುಧವಾರ ಮನೆಗೆ ಬಂದ ಅವರನ್ನು ಆತನ ತಂದೆ, ಸಹೋದರಿ ಹಾಗೂ ಕುಟುಂಬದ ಇತರರು ಸ್ವಾಗತಿಸಿ ಆತನಿಗೆ ಇಷ್ಟವಾದ ತಿಂಡಿ–ತಿನಿಸುಗಳನ್ನು ಮಾಡಿ ಕೊಟ್ಟಿದ್ದಾರೆ.

ದೆಹಲಿ ಸರ್ಕಾರದ ನೌಕರನಾಗಿದ್ದ ತುಲಾ ರಾಮ್ ಎನ್ನುವರು 1993ರಲ್ಲಿ ತಮ್ಮ ಮಗ ರಾಜುನನ್ನು ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಎಂಬಲ್ಲಿನ ಧೀನ ಬಂದು ಪಬ್ಲಿಕ್ ಶಾಲೆಗೆ ಸೇರಿಸಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಸಹೋದರಿ ಜೊತೆ ಜಗಳ ಮಾಡಿಕೊಂಡಿದ್ದ ರಾಜು ಶಾಲೆಯಿಂದ ಸ್ವಲ್ಪ ದೂರ ಹೋಗಿ ರಸ್ತೆ ಪಕ್ಕ ಕೂತಿದ್ದ. ಇದೇ ವೇಳೆ ರಾಜುನನ್ನು ಟ್ರಕ್‌ನಲ್ಲಿ ಹೊರಟಿದ್ದ ಮೂವರು ಅಪಹರಣ ಮಾಡಿದ್ದರು.

ಅಪಹರಣ ಮಾಡಿದ್ದವರು ರಾಜಸ್ಥಾನದ ಜೈಸಲ್ಮೇರ ಬಳಿಯ ಬಂಜರು ಪ್ರದೇಶವೊಂದರ ಮನೆಯಲ್ಲಿ ರಾಜುನನ್ನು ಕೂಡಿ ಹಾಕಿದ್ದರು. ಹಿಂಸೆ ಕೊಟ್ಟು ಕೆಲ ದಿನಗಳ ಬಳಿಕ ಆತನಿಗೆ ಕುರಿ ಕಾಯುವ ಕೆಲಸ ಒಪ್ಪಿಸಿದ್ದರು.

ಹೀಗೆ ಮೂವತ್ತು ವರ್ಷ ಅಲ್ಲಿಯೇ ಕಾಲ ಕಳೆದ ರಾಜು ಕಳೆದ ಐದು ದಿನಗಳ ಹಿಂದೆ ಆ ಸ್ಥಳಕ್ಕೆ ಕುರಿಗಳನ್ನು ಕೊಂಡುಕೊಳ್ಳಲು ದೆಹಲಿಯಿಂದ ಬಂದಿದ್ದ ಸಿಖ್ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದ. ರಾಜುನ ಪರಿಸ್ಥಿತಿ ನೋಡಿ ಮಮ್ಮುಲ ಮರುಗಿದ್ದ ಸಿಖ್ ವ್ಯಕ್ತಿ ರಾಜುವನ್ನು ಕುರಿ ತುಂಬಿದ್ದ ಟ್ರಕ್ ಒಳಗೆ ಕೂರಿಸಿಕೊಂಡು ಗಾಜಿಯಾಬಾದ್–ನೋಯ್ಡಾ ಬಳಿ ಬಿಟ್ಟು ಹೋಗಿದ್ದರು.

ತನ್ನ ಪೂರ್ವಾಶ್ರಮವನ್ನು ಮರೆತಿದ್ದ ರಾಜು ನೋಯ್ಡಾ ಬಳಿ ಅದೃಷ್ಟವಶಾತ್ ಪೊಲೀಸ್ ಕಣ್ಣಿಗೆ ಬಿದ್ದಿದ್ದ. ಗಾಜಿಯಾಬಾದ್ ಪೊಲೀಸರು ರಾಜುವನ್ನು ಮನೆಗೆ ಸೇರಿಸುವಲ್ಲಿ ಸಫಲವಾಗಿದ್ದಾರೆ.

‘ಕುರಿ ಕಾಯ್ದು ಬಂದ ಪ್ರತಿದಿನ ರಾತ್ರಿ ಆ ಮನೆಯಲ್ಲಿ ನನ್ನ ಕಾಲಿಗೆ ಸರಪಳಿ ಹಾಕಿ ಕೂಡಿಡುತ್ತಿದ್ದರು. ಎರಡು ದಿನಕ್ಕೊಮ್ಮೆ ಊಟ ಕೊಡುತ್ತಿದ್ದರು‘ ಎಂದು ರಾಜು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಕುಟುಂಬದವರನ್ನು ಕಳೆದುಕೊಂಡು ಹೊರ ಪ್ರಪಂಚದ ಸಂಪರ್ಕ ಇಲ್ಲದೇ ಮೂವತ್ತು ವರ್ಷ ಜೀತದಾಳಾಗಿ ಕೆಲಸ ಮಾಡಿ ರಾಜು ಅವರು ತೀವ್ರವಾಗಿ ನೊಂದಿರುವುದಲ್ಲದೇ ಮಾನಸಿಕ ಆಘಾತಕ್ಕೂ ಒಳಗಾಗಿದ್ದಾರೆ.

ಮೂವತ್ತು ವರ್ಷಗಳ ಬಳಿಕ ಮಗನ ಆಗಮನದ ಸಂತಸದಿಂದ ಆನಂದಭಾಷ್ಪ ಸುರಿಸಿರುವ ತುಲಾ ರಾಮ್, ‘ಮಗ ಆಘಾತದಿಂದ ಸರಿ ಹೋದ ಸ್ವಲ್ಪ ದಿನಗಳ ಬಳಿಕ ಅವನಿಗೆ ನಮ್ಮದೇ ಹಿಟ್ಟಿನ ಗಿರಣಿಯ ಕೆಲಸ ನೋಡಿಕೊಂಡು ಹೋಗಲು ಹೇಳುತ್ತೇನೆ. ಆ ನಂತರ ಸೂಕ್ತ ವಧುವನ್ನು ನೋಡಿ ಮದುವೆಯನ್ನೂ ಮಾಡುತ್ತೇನೆ’ ಎಂದು ಹೇಳಿದ್ದಾರೆ.

‘ಅಂದು ಮಗ ಕಾಣೆಯಾದಾಗ ಸಾಕಷ್ಟು ಹುಡುಕಾಡಲಾಗಿತ್ತು. ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಏನೂ ಪ್ರಯೋಜನ ಆಗಿರಲಿಲ್ಲ. ಕೆಲ ದಿನಗಳ ಬಳಿಕ ರಾಜುನನ್ನು ಬಿಡುಗಡೆ ಮಾಡಬೇಕಾದರೆ ₹8 ಲಕ್ಷ ಕೊಡಿ ಎಂದು ಅನಾಮಧೇಯ ವ್ಯಕ್ತಿಗಳು ಮೇಲಿಂದ ಮೇಲೆ ಬೇಡಿಕೆ ಇಟ್ಟಿದ್ದರು. ಆದರೆ, ನಮಗೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಪೊಲೀಸರು ಕೈ ಚೆಲ್ಲಿದರು. ಆದರೆ ಅಂತೂ ನನ್ನ ಮಗ ಮನೆಗೆ ಬಂದಿರುವುದು ಸಂತೋಷವಾಗಿದೆ ಎಂದು ತುಲಾ ರಾಮ್ ಹೇಳಿದ್ದಾರೆ.

ರಾಜುನನ್ನು ನೋಡಿ ತುಲಾ ರಾಮ್ ಅವರ ನೆರೆಹೊರೆಯವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ತಂಡೋಪತಂಡವಾಗಿ ತುಲಾ ರಾಮ್ ಅವರ ಮನೆಗೆ ಆಗಮಿಸುತ್ತಿದ್ದಾರೆ.

‘ನಮ್ಮ ಖೋಡಾ ಪೊಲೀಸ್ ಠಾಣೆ ಸಿಬ್ಬಂದಿ ರಾಜು ಎನ್ನುವ ವ್ಯಕ್ತಿಯನ್ನು ಆತನ ಮನೆಗೆ ತಲುಪಿಸಿದ್ದಾರೆ. ಈ ಕೇಸ್‌ ಅನ್ನು ಪುನಃ ತೆರೆಯಲಾಗುತ್ತದೆ. ನಮ್ಮ ಸಿಬ್ಬಂದಿ ಶೀಘ್ರವೇ ಜೈಸಲ್ಮೇರ್‌ಗೆ ಭೇಟಿ ನೀಡಿ ವಿಚಾರಣೆ ನಡೆಸಲಿದೆ’ ಎಂದು ಗಾಜಿಯಾಬಾದ್ ಡಿಸಿಪಿ ನಿಮಿಷ್ ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.