ADVERTISEMENT

ನಿರ್ಬಂಧಗಳ ಸಡಿಲಿಕೆ ಇನ್ನಷ್ಟು ಕಾಲಾವಕಾಶ : ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
   

ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಸಂವಹನ ಮಾಧ್ಯಮಗಳ ಮೇಲೆ ಹೇರಿದ್ದ ನಿರ್ಬಂಧಗಳ ಸಡಿಲಿಕೆ ಇನ್ನಷ್ಟು ಕಾಲಾವಕಾಶ ನೀಡುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ನಿರ್ಬಂಧಗಳನ್ನು ಸಡಿಲಿಸಲು ಆದೇಶ ನೀಡುವಂತೆ ಕೋರಿ ಕಾಶ್ಮೀರ್‌ ಟೈಮ್ಸ್‌ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಬಾಸಿನ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು, ‘ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಗಳ ಮೇಲಿನ ನಿರ್ಬಂಧವನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿದೆ ಎಂಬ ವರದಿಯನ್ನು ಇಂದಿನ ಪತ್ರಿಕೆಗಳಲ್ಲಿ ಓದಿದ್ದೇವೆ. ಜಮ್ಮು ಕಾಶ್ಮೀರ ಹೈಕೋರ್ಟ್‌ನಿಂದ ನಮಗೆ ಇಂದು ಮುಂಜಾನೆ ಕರೆಗಳು ಸಹ ಬಂದಿವೆ. ಆದ್ದರಿಂದ ನಾವು ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶ ನೀಡಲು ಬಯಸುತ್ತೇವೆ. ಪರಿಸ್ಥಿತಿಯನ್ನು ಅವಲೋಕಿಸಿ, ಈ ಅರ್ಜಿಯ ವಿಚಾರಣೆಯನ್ನು ಯಾವಾಗ ನಡೆಸಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ’ ಎಂದು ಹೇಳಿತು.

‘ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ನಿಧಾನವಾಗಿ ಎಲ್ಲಾ ನಿರ್ಬಂಧಗಳನ್ನೂ ಸಡಿಲಿಸಲಾಗುವುದು’ ಎಂದು ವಿಚಾರಣೆಯ ಆರಂಭದಲ್ಲೇ ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿತು.

ADVERTISEMENT

ದೋಷಯುಕ್ತ ಅರ್ಜಿ: ಆಕ್ಷೇಪ: ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ವಕೀಲ ಎಂ.ಎಲ್‌. ಶರ್ಮಾ ಅವರು ದೋಷಯುಕ್ತವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

‘ರಾಷ್ಟ್ರಪತಿ ಅವರ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿರುವ ನೀವು, ಅದನ್ನು ರದ್ದುಮಾಡಬೇಕು ಎಂದು ಮನವಿ ಮಾಡಿಲ್ಲ. ಈ ಅರ್ಜಿಯನ್ನು ಕೂಡಲೇ ತಳ್ಳಿಹಾಕಬಹುದಾಗಿತ್ತು. ಆದರೆ ಇದರ ಪರಿಣಾಮ ಈ ವಿಚಾರವಾಗಿ ಸಲ್ಲಿಸಿರುವ ಇತರ ಅರ್ಜಿಗಳ ಮೇಲೂ ಆಗುತ್ತದೆ’ ಎಂದರು.

‘ಅರ್ಜಿಯನ್ನು 30 ನಿಮಿಷಗಳ ಕಾಲ ಓದಿದರೂ ಅದರ ಒಟ್ಟು ಅಭಿಪ್ರಾಯ ಏನೆಂಬುದು ನಮಗೆ ಅರ್ಥವಾಗಲಿಲ್ಲ. ನೀವು ಕೇಳುತ್ತಿರುವುದಾದರೂ ಏನು? ಇಷ್ಟೊಂದು ಗಂಭೀರ ವಿಚಾರದ ಬಗ್ಗೆ ಇಂಥ ಅರ್ಥಹೀನ ಅರ್ಜಿಯನ್ನು ಸಲ್ಲಿಸುವುದೇ’ ಎಂದು ಗೊಗೊಯಿಪ್ರಶ್ನಿಸಿದರು.

‘ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದರಿಂದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ’ ಎಂದು ವಕೀಲರು ಹೇಳಿದ ಬಳಿಕ, ದೋಷಗಳನ್ನು ಸರಿಪಡಿಸಿ ಮತ್ತೆ ಹೊಸ ಅರ್ಜಿ ಸಲ್ಲಿಸಲು ನ್ಯಾಯಮೂರ್ತಿಗಳು ವಕೀಲರಿಗೆ ಅವಕಾಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.