ADVERTISEMENT

'ಇಡಿ' ಎದುರು ರಿಯಾ ಚಕ್ರವರ್ತಿ ಹಾಜರು

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ; ಅಕ್ರಮ ಹಣ ವರ್ಗಾವಣೆ ಆರೋಪ

ಪಿಟಿಐ
Published 7 ಆಗಸ್ಟ್ 2020, 8:50 IST
Last Updated 7 ಆಗಸ್ಟ್ 2020, 8:50 IST
ನಟ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ವಿಚಾರಣೆಗೆ ಹಾಜರಾಗಲು ಶುಕ್ರವಾರ ಮುಂಬೈನ ಜಾರಿ ನಿರ್ದೇಶನಾಲಯಕ್ಕೆ ಹೋಗುತ್ತಿರುವುದು.  
ನಟ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ವಿಚಾರಣೆಗೆ ಹಾಜರಾಗಲು ಶುಕ್ರವಾರ ಮುಂಬೈನ ಜಾರಿ ನಿರ್ದೇಶನಾಲಯಕ್ಕೆ ಹೋಗುತ್ತಿರುವುದು.     

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಶುಕ್ರವಾರ ಇಲ್ಲಿನ ಜಾರಿ ನಿರ್ದೇಶನಾಲಯದ (ಇಡಿ) ಎದುರು ವಿಚಾರಣೆಗಾಗಿ ಹಾಜರಾದರು.

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು ಮತ್ತು ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ರಿಯಾ ಚಕ್ರವರ್ತಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ತನ್ನ ವಿರುದ್ಧ ಪಟ್ನಾದಲ್ಲಿ ದಾಖಲಾಗಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೂ, ಇಡಿ ಎದುರು ಹಾಜರಾಗುವುದನ್ನು ಮುಂದೂಡಬೇಕೆಂದು ರಿಯಾ ಚಕ್ರವರ್ತಿ ಮನವಿ ಮಾಡಿದ್ದರು.‘ಆದರೆ ರಿಯಾ ಅವರ ಮನವಿಯನ್ನು ಇಡಿ ತಿರಸ್ಕರಿಸಿತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು’ ಎಂದು ರಿಯಾ ಪರ ವಕೀಲ ಸತೀಶ್ ಮಾನೆಶಿಂಧೆ ಅವರು ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

ಸುಶಾಂತ್ ಸಿಂಗ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು, ನಟಿ ರಿಯಾ ಮತ್ತು ಅವರ ಕುಟುಂಬದವರ ವಿರುದ್ಧ ಜುಲೈ 25ರಂದು ಪಟ್ನಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ರಿಯಾ, ಆಕೆಯ ಪೋಷಕರಾದ ಇಂದ್ರಜಿತ್, ಸಂಧ್ಯಾಚಕ್ರವರ್ತಿ, ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡಾ ಮತ್ತು ಶೃತಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಜುಲೈ 31 ರಂದು ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೆ.ಕೆ.ಸಿಂಗ್ ಆರೋಪಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ರಿಯಾ ವಿರುದ್ಧ ದೂರು ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.