ADVERTISEMENT

ಅಪರಾಧಿಗೂ ಇದೆ ಸಂತಾನೋತ್ಪತ್ತಿ ಹಕ್ಕು: ದೆಹಲಿ ಹೈಕೋರ್ಟ್‌

ಪಿಟಿಐ
Published 28 ಡಿಸೆಂಬರ್ 2023, 14:49 IST
Last Updated 28 ಡಿಸೆಂಬರ್ 2023, 14:49 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ‘ವ್ಯಕ್ತಿಯೊಬ್ಬರು ಜೈಲಿನಲ್ಲಿದ್ದಾರೆ ಎಂದಾಕ್ಷಣ ಆತ ಕಡಿಮೆ ದರ್ಜೆಯ ನಾಗರಿಕ ಎಂದಲ್ಲ. ಅಪರಾಧಿಗೂ ಜೀವಿಸುವ ಹಕ್ಕಿದೆ ಮತ್ತು ಜೀವಿಸುವ ಹಕ್ಕು ಎಂಬುದು ಸಂತಾನೋತ್ಪತ್ತಿಯ ಹಕ್ಕೂ ಹೌದು. ಇದು ಅಪರಾಧಿಗೂ ಅನ್ವಯವಾಗುತ್ತದೆ’ ಎಂದು ದೆಹಲಿ ಹೈಕೋರ್ಟ್‌ ಗುರುವಾರ ಹೇಳಿದೆ. ಹೀಗಾಗಿ, ಐವಿಎಫ್‌ ಮೂಲಕ ಮಕ್ಕಳನ್ನು ಪಡೆದುಕೊಳ್ಳುವುದಕ್ಕಾಗಿ 41 ವರ್ಷದ ಅಪರಾಧಿಗೆ ನ್ಯಾಯಾಲಯವು ನಾಲ್ಕು ವಾರಗಳ ಪೆರೋಲ್‌ ನೀಡಿದೆ.

‘ಶಿಕ್ಷೆ ಮುಗಿಯುವುದರ ಒಳಗೆ, ಅಪರಾಧಿಯ ಹಾಗೂ ಆತನ 38 ವರ್ಷದ ಹೆಂಡತಿಯ ಸಂತಾನೋತ್ಪತ್ತಿ ಸಾಮರ್ಥ್ಯವು ಕುಂಟಿತವಾಗುತ್ತದೆ. ಆತ ಅಪರಾಧಿ ಎನ್ನುವುದಕ್ಕಾಗಿಯೇ ಮಕ್ಕಳನ್ನು ಪಡೆದುಕೊಳ್ಳಲು ತಡವಾಗುವಂತೆ ಮಾಡುವುದು, ವ್ಯಕ್ತಿಯೊಬ್ಬರ ಪೋಷಕತ್ವದ ಹಕ್ಕನ್ನು ಕಸಿದಂತಾಗುತ್ತದೆ’ ಎಂದು ನ್ಯಾಯಮೂರ್ತಿ ಸ್ವರಣ್‌ ಕಾಂತಾ ಶರ್ಮಾ ಅವರು ಅಭಿಪ್ರಾಯಪಟ್ಟರು.

‘ವೈವಾಹಿಕ ಸಂಬಂಧ ನಿರ್ವಹಿಸುವುದು ಅಥವಾ ವೈವಾಹಿಕ ಹಕ್ಕಿಗೆ ಸಂಬಂಧಿಸಿ ಪೆರೋಲ್‌ ನೀಡಬೇಕು ಎಂಬ ಬಗ್ಗೆ ನ್ಯಾಯಾಲಯವು ಚರ್ಚೆ ನಡೆಸುತ್ತಿಲ್ಲ. ಮಕ್ಕಳನ್ನು ಪಡೆದುಕೊಳ್ಳುವ ಹಕ್ಕನ್ನು ಮಾತ್ರವೇ ಇಲ್ಲಿ ಚರ್ಚಿಸಲಾಗುತ್ತಿದೆ. ಜೈಲಿನ ನಿಯಮಾವಳಿ ಅನ್ವಯವೇ ಪೆರೋಲ್‌ ನೀಡಲಾಗುತ್ತಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.