ADVERTISEMENT

‘ಆರ್‌ಐಸ್ಯಾಟ್’ ಉಡಾವಣೆ ಯಶಸ್ವಿ

ಪಿಟಿಐ
Published 11 ಡಿಸೆಂಬರ್ 2019, 20:00 IST
Last Updated 11 ಡಿಸೆಂಬರ್ 2019, 20:00 IST
RISAT
RISAT   

ಶ್ರೀಹರಿಕೋಟಾ: ದೇಶದ ಅತ್ಯಂತ ಸುಧಾರಿತ ಕಣ್ಗಾವಲು ಉಪಗ್ರಹ ಆರ್‌ಐಸ್ಯಾಟ್–2ಬಿಆರ್‌1 ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ಕಕ್ಷೆಗೆ ತಲುಪಿಸುವಲ್ಲಿ ಸಫಲವಾಯಿತು.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 3.25ಕ್ಕೆ ಆರ್‌ಐಸ್ಯಾಟ್–2ಬಿಆರ್‌1 ಉಪಗ್ರಹ ಸೇರಿದಂತೆ 10 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ48 ರಾಕೆಟ್ ನಭಕ್ಕೆ ಜಿಗಿಯಿತು. ಉಡಾವಣೆಯಾದ 16ನೇ ನಿಮಿಷಕ್ಕೆ ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿತು. ನಂತರ ಒಂದು ನಿಮಿಷದ ಬಳಿಕ ಉಳಿದ 9 ಉಪಗ್ರಹಗಳಲ್ಲಿ ಮೊದಲನೆಯದು ಕಕ್ಷೆ ಸೇರಿತು. 21 ನಿಮಿಷಗಳಲ್ಲಿ ಎಲ್ಲಾ ಉಪಗ್ರಹಗಳು ನಿಗದಿತ ಕಕ್ಷೆ ಸೇರಿವೆ. ಇವುಗಳಲ್ಲಿ ಇಸ್ರೇಲ್‌, ಇಟಲಿ, ಜಪಾನ್‌ಗೆ ಸೇರಿದ ತಲಾ 1 ಹಾಗೂ ಅಮೆರಿಕದ 6 ಉಪಗ್ರಹಗಳು ಇದ್ದವು. ಉಡಾವಣಾ ಕಾರ್ಯ ಪೂರ್ಣಗೊಂಡ ಬಳಿಕ ಇಸ್ರೊ ಅಧ್ಯಕ್ಷ ಕೆ. ಶಿವನ್ ಹಾಗೂ ಇತರೆ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿದರು.

ಬಳಕೆ : l ಪ್ರಮುಖವಾಗಿ ಸೇನಾ ಕಾರ್ಯಾಚರಣೆಗೆ l ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆ ನೆರವಿಗೆ

ADVERTISEMENT

ಸಾಮರ್ಥ್ಯ: l ಭೂಮಿ ಮೇಲಿನ ಚಿತ್ರಗಳನ್ನು ರೇಡಾರ್ ಮೂಲಕ ಸೆರೆಹಿಡಿದು ರವಾನಿಸುತ್ತದೆ ಈ ಉಪಗ್ರಹ l ಕೇವಲ 35 ಸೆಂ.ಮೀ ಅಂತರದಲ್ಲಿ ಇರುವ ವಸ್ತುಗಳನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಹೊಂದಿದೆ

***

ಇಂದಿನ ಉಡಾವಣೆ ಪಿಎಸ್‌ಎಲ್‌ವಿ ರಾಕೆಟ್‌ನ 50ನೇ ಕಾರ್ಯಾಚರಣೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಇದು ಐತಿಹಾಸಿಕವಾದದ್ದು.

– ಕೆ. ಶಿವನ್ ಇಸ್ರೊ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.