ಶ್ರೀ ಕೂಡಲ್ಮಾಣಿಕ್ಯಂ ದೇವಾಲಯ
ಚಿತ್ರ: ಎಕ್ಸ್
ತಿರುವನಂತಪುರ: ಕೇರಳದ ತ್ರಿಶ್ಶೂರ್ ಜಿಲ್ಲೆಯ ಶ್ರೀ ಕೂಡಲ್ಮಾಣಿಕ್ಯಂ ದೇವಾಲಯದಲ್ಲಿ ನಡೆದಿದೆ ಎನ್ನಲಾಗಿದ್ದ ಜಾತಿ ತಾರತಮ್ಯ ವಿಚಾರವು ಸಿಬ್ಬಂದಿಯ ರಾಜೀನಾಮೆಯಲ್ಲಿ ಕೊನೆಗೊಳ್ಳದೆ ಇದೀಗ ನ್ಯಾಯಾಲಯದ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ.
ದೇವಾಲಯದ ಕಳಕಮ್ (ಹೂವಿನ ಹಾರ ತಯಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ) ಹುದ್ದೆಗೆ ಹಿಂದೂ–ಎಳವ ಒಬಿಸಿ ಸಮುದಾಯದ ಅಭ್ಯರ್ಥಿಯನ್ನು ನೇಮಕ ಮಾಡುವ ದೇವಸ್ವಂ ಮಂಡಳಿಯ ನಿರ್ಧಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಮೇಲ್ಜಾತಿಯ ಹಿಂದೂ–ವಾರಿಯರ್ ಸಮುದಾಯ ಹೇಳಿದೆ.
ಇತ್ತೀಚೆಗಷ್ಟೇ ತಿರುವನಂತಪುರದ ನಿವಾಸಿ, ಎಳವ ಸಮುದಾಯದ ಬಾಲು ಬಿ.ಎ ಎಂಬುವವರನ್ನು ಕಳಕಮ್ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ, ಈ ಹುದ್ದೆಯು ಮೇಲ್ಜಾತಿಯ ವಾರಿಯರ್ ಸಮುದಾಯಕ್ಕೆ ಪಾರಂಪರಿಕವಾಗಿ ಮೀಸಲಿದೆ. ಹೀಗಾಗಿ ಅವರನ್ನೇ ನೇಮಕಗೊಳಿಸಬೇಕು ಎಂದು ದೇವಾಲಯದ ತಂತ್ರಿಗಳು (ಬ್ರಾಹ್ಮಣ ಸಮುದಾಯ) ಒತ್ತಡ ಹೇರಿದ್ದರು.
ತಂತ್ರಿಗಳ ಒತ್ತಡಕ್ಕೆ ಮಣಿದು ಬಾಲು ಅವರನ್ನು ದೇವಸ್ವಂ ಮಂಡಳಿಯು ಕಚೇರಿ ಕೆಲಸಕ್ಕೆ ನೇಮಿಸಿತ್ತು. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಬಾಲು ವೈಯಕ್ತಿಕ ಕಾರಣ ನೀಡಿ, ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದೀಗ ಎಳವ ಸಮುದಾಯದ ಮತ್ತೋರ್ವ ಅಭ್ಯರ್ಥಿ ಕೆ.ಎಸ್.ಅನುರಾಗ್ ಎಂಬುವವರನ್ನು ಹುದ್ದೆಗೆ ಆಯ್ಕೆ ಮಾಡಲಾಗಿದೆ. ಆದರೆ, ಅವರು ಸೇವೆಗೆ ಸೇರುವ ಮುನ್ನವೇ ‘ಸಮಸ್ತ ಕೇರಳ ವಾರಿಯರ್ ಸಮಾಜಂ’ನ ಪ್ರಧಾನ ಕಾರ್ಯದರ್ಶಿ ವಿ.ವಿ.ಮುರುಳೀಧರನ್ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
‘ಕಳಕಮ್ ಹುದ್ದೆ ಮೇಲೆ ವಾರಿಯರ್ ಸಮುದಾಯಕ್ಕೆ ಪಾರಂಪರಿಕ ಹಕ್ಕಿದೆ. ಆದಾಗ್ಯೂ, ದೇವಸ್ವಂ ಮಂಡಳಿ ನಮ್ಮ ಗಮನಕ್ಕೂ ತರದೆ ಆ ಹುದ್ದೆಯ ನೇಮಕಕ್ಕೆ ಮುಂದಾಗಿದೆ. ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಈ ವಿಚಾರವನ್ನು ತಾರತಮ್ಯ ಎಂದು ಪರಿಗಣಿಸುವ ಅಗತ್ಯವಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.