ADVERTISEMENT

ರಕ್ಷಣಾ ಕ್ಷೇತ್ರಕ್ಕೆ ₹ 3.18 ಲಕ್ಷ ಕೋಟಿ; ಅಲ್ಪ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:38 IST
Last Updated 5 ಜುಲೈ 2019, 19:38 IST
   

ನವದೆಹಲಿ: ರಕ್ಷಣಾ ಕ್ಷೇತ್ರಕ್ಕೆ ನಿಗದಿಪಡಿಸಲಾದ ಅನುದಾನದಲ್ಲಿ ಕೇಂದ್ರ ಸರ್ಕಾರ ಅಲ್ಪ ಏರಿಕೆ ಮಾಡಿದ್ದು, 2019–20ನೇ ಹಣಕಾಸು ವರ್ಷದಲ್ಲಿ ₹ 3.18 ಲಕ್ಷ ಕೋಟಿ ಹಂಚಿಕೆ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಮೊತ್ತ ₹ 2.98 ಲಕ್ಷ ಕೋಟಿ ಇತ್ತು.

ನಿಗದಿತ ಅನುದಾನದಲ್ಲಿ ₹ 1,08, 248 ಕೋಟಿ ಬಂಡವಾಳ ಉದ್ದೇಶದ್ದಾಗಿದೆ. ನೂತನ ಶಸ್ತ್ರಾಸ್ತ್ರಗಳ ಖರೀದಿ, ಮಿಲಿಟರಿ ಹಾರ್ಡ್‌ವೇರ್‌ ಹಾಗೂ ಇತರೆ ಖರೀದಿಗೆ ವಿನಿಯೋಗಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಹಂಚಿಕೆಯಾದ ಮೊತ್ತದಲ್ಲಿ ಸಿಂಹಪಾಲು ಯೋಜನೇತರ ವೆಚ್ಚವಾಗಿದೆ. ಸಿಬ್ಬಂದಿಯ ವೇತನ, ಸೌಲಭ್ಯಗಳ ನಿರ್ವಹಣೆಗೆ ₹ 2,10,682 ಕೋಟಿ ವಿನಿಯೋಗಿಸಲಿದ್ದು, ಕಳೆದ ಬಜೆಟ್‌ನಲ್ಲಿ ಈ ಮೊತ್ತ ₹ 1,88,188 ಕೋಟಿ ಆಗಿತ್ತು.

ADVERTISEMENT

ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹಂಚಿಕೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಚುನಾವಣೆಗೂ ಮೊದಲು ಪೀಯೂಷ್‌ ಗೋಯಲ್‌ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ನಿಗದಿಸಿದ್ದ ಮೊತ್ತಕ್ಕಿಂತ ಅಲ್ಪ ಏರಿಕೆಯಷ್ಟೇ ಕಂಡುಬಂದಿದೆ.

ಮಧ್ಯಂತರ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಈ ಬಜೆಟ್‌ನಲ್ಲಿ ಅನುದಾನದ ಏರಿಕೆಯ ಪ್ರಮಾಣ ಶೇ 7.93. ಹಂಚಿಕೆಯಾದ ಮೊತ್ತದಲ್ಲಿ ಪಿಂಚಣಿ ಉದ್ದೇಶಗಳಿಗೆ ಕಾದಿರಿಸಿರುವ ₹ 1,12,079 ಕೋಟಿ ಇದರಲ್ಲಿ ಸೇರ್ಪಡೆಯಾಗಿಲ್ಲ.

ಪಿಂಚಣಿಗೆ ನಿಗದಿಪಡಿಸಲಾಗಿರುವ ಮೊತ್ತವೂ ಸೇರಿದರೆ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆಯಾಗಿರುವ ಒಟ್ಟು ಮೊತ್ತ ₹ 4.31 ಲಕ್ಷ ಕೋಟಿ ಆಗಲಿದ್ದು, ಒಟ್ಟಾರೆ ಏರಿಕೆಯ ಪ್ರಮಾಣ ಶೇ 15.47ರಷ್ಟು ಆಗಲಿದೆ.

ಉತ್ತೇಜನ: ರಕ್ಷಣಾ ಪರಿಕರಗಳ ಉತ್ಪಾದನೆಗೆ ಸಂಬಂಧಿಸಿದ ಸ್ಟಾರ್ಟ್ ಅಪ್‌ಗಳಿಗೆ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಉತ್ತೇಜನ ನೀಡಲಾಗುವುದು ಎಂದು ಸಚಿವೆ ತಿಳಿಸಿದರು.

ರಕ್ಷಣಾ ಪರಿಕರಗಳಆಮದು, ಸುಂಕ ವಿನಾಯಿತಿ

ಆಮದು ಮಾಡಿಕೊಳ್ಳುವ ರಕ್ಷಣಾ ಪರಿಕರಗಳು, ಬಿಡಿಭಾಗಗಳಿಗೆ ಮೂಲ ಸೀಮಾಸುಂಕದಿಂದ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದರು.

‘ಆದಾಯದ ಪ್ರತಿ ರೂಪಾಯಿಯಲ್ಲಿ 9 ಪೈಸೆ ರಕ್ಷಣೆಗೆ ವ್ಯಯವಾಗಲಿದೆ. ರಕ್ಷಣೆ, ಸೌಲಭ್ಯದ ಆಧುನೀಕರಣ, ಮೇಲ್ದರ್ಜೆಗೆ ಏರಿಸುವುದು ತಕ್ಷಣದ ಅಗತ್ಯ. ಇದು, ರಾಷ್ಟ್ರೀಯ ಆದ್ಯತೆ ಕೂಡಾ’ ಎಂದು ಸಚಿವೆ ಪ್ರತಿಪಾದಿಸಿದರು.

ಭಾರತದಲ್ಲಿ ಉತ್ಪಾದನೆಯಾಗದ, ಆಮದಾಗುವ ರಕ್ಷಣಾ ಪರಿಕರಗಳಿಗೆ ಸೀಮಾಸುಂಕದ ವಿನಾಯಿತಿ ಸಿಗಲಿದೆ.ರಕ್ಷಣಾ ಪರಿಕರಗಳ ಉತ್ಪಾದನೆಗೆ ಸಂಬಂಧಿಸಿದ ಸ್ಟಾರ್ಟ್ ಅಪ್‌ಗಳಿಗೆ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಉತ್ತೇಜನ ನೀಡಲಾಗುವುದು ಎಂದು ಸಚಿವೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.