ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿ ಗದ್ದುಗೆಗೇರಿದ 48 ತಿಂಗಳುಗಳಲ್ಲಿ 41 ಬಾರಿ ವಿದೇಶ ಯಾತ್ರೆ ಕೈಗೊಂಡಿದ್ದು, 52 ದೇಶಗಳಿಗೆ ಭೇಟಿ ನೀಡಿದ್ದಾರೆ.ಮೋದಿಯವರ ವಿದೇಶ ಪ್ರಯಾಣಕ್ಕೆ ಖರ್ಚಾದ ಹಣ ₹355 ಕೋಟಿ! ಈ ಪ್ರಯಾಣಗಳಲ್ಲಿ ಒಟ್ಟು 165 ದಿನ ಮೋದಿ ವಿದೇಶದಲ್ಲಿದ್ದರು ಎಂದು ಭೀಮಪ್ಪ ಗಡಾದ ಎಂಬವರು ಕೇಳಿದ ಆರ್‌ಟಿಐ ಪ್ರಶ್ನೆಗೆ ಪ್ರಧಾನಿ ಕಚೇರಿ ಈ ರೀತಿ ಉತ್ತರಿಸಿದೆ ಎಂದು ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
52 ದೇಶಗಳಿಗೆ ಕೈಗೊಂಡ ಪ್ರವಾಸದಲ್ಲಿ 2015 ಏಪ್ರಿಲ್ 9 ರಿಂದ 15ರ ವರೆಗೆ (9 ದಿನ) ಫ್ರಾನ್ಸ್, ಜರ್ಮನಿ, ಕೆನಡಾ ಈ ಮೂರು ದೇಶಗಳ ಪ್ರವಾಸಕ್ಕೆ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಈ ಪ್ರವಾಸಕ್ಕೆ ಖರ್ಚಾದ ಹಣ ₹31,25,78,000!
ಅದೇ ವೇಳೆ ಅತೀ ಕಡಿಮೆ ವೆಚ್ಚದ ಪ್ರವಾಸ ಕೈಗೊಂಡಿದ್ದು 2014 ಜೂನ್ 15-16ರಂದು ಭೂತಾನ್‍ಗಾಗಿತ್ತು.ಇದಕ್ಕಾಗಿ ಖರ್ಚು ಮಾಡಿದ್ದು ₹2,45,27,465.
ಕೆಲವು ವರ್ಷಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯವರ ವಿದೇಶ ಪ್ರವಾಸಕ್ಕಾಗಿ ಮಾಡಿದ ಖರ್ಚಿನ ಬಗ್ಗೆ ಆರ್‌ಟಿಐ ಪ್ರಶ್ನೆ ಕೇಳಿದ್ದೆ.ಇತ್ತೀಚೆಗೆ ಪ್ರಧಾನಿಯವರ ವಿದೇಶ ಪ್ರವಾಸದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದರಿಂದ ಈ ಪ್ರಶ್ನೆ ಕೇಳಿದೆ.ನನ್ನ ಪ್ರಶ್ನೆಗೆ ಸಿಕ್ಕಿದ ಉತ್ತರ ನೋಡಿ ದಂಗಾದೆ ಎಂದು ಗಡಾದ ಪ್ರತಿಕ್ರಿಯಿಸಿದ್ದಾರೆ.
ಆದಾಗ್ಯೂ, ಭಾರತದ ವಿವಿಧ ಭಾಗಗಳಿಗೆ ಪ್ರಧಾನಿ ಮಾಡಿರುವ ಪ್ರವಾಸ ಮತ್ತು ಖರ್ಚು ವೆಚ್ಚಗಳ ಬಗ್ಗೆ ಆರ್‌ಟಿಐ ಮಾಹಿತಿ ನೀಡಿಲ್ಲ.ಭದ್ರತೆಯ ದೃಷ್ಟಿಯಿಂದ ನಾನು ಅದರ ವಿವರಗಳನ್ನು ಕೇಳಲಿಲ್ಲ.ಖರ್ಚು ಎಷ್ಟಾಯಿತು ಎಂದು ಕೇಳಿದರೂ ಉತ್ತರಿಸಲು ಪ್ರಧಾನಿ ಕಚೇರಿ ನಿರಾಕರಿಸಿದೆ.ನಾನು ಕುತೂಹಲದಿಂದ ಕೇಳಿದ ಪ್ರಶ್ನೆ ಇದಾಗಿತ್ತು.ಈ ವಿಷಯ ಸಾರ್ವಜನಿಕರಿಗೆ ತಲುಪಬೇಕಿದೆ.ಅಷ್ಟೇ ಅಲ್ಲದೆ ಈ ಪ್ರವಾಸದಿಂದ ಕೇಂದ್ರ ಸರ್ಕಾರ ಗಳಿಸಿದ್ದೇನು? ಎಂಬುದರ ಬಗ್ಗೆ ಮೋದಿ ಸರ್ಕಾರ ವರದಿ ಬಿಡುಗಡೆ ಮಾಡಲಿ ಎಂದು ಗಡಾದಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.