ಛತ್ರಪತಿ ಸಂಭಾಜಿನಗರ: ಆಧುನಿಕ ವಿಧಾನಗಳನ್ನು ಭಾರತೀಯ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ದೇಶವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬಹುದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಜ್ಯೇಷ್ಠ ಪಶುವೈದ್ಯ ಪ್ರತಿಷ್ಠಾನದ 28ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾಗತಿಕ ಅನಿಶ್ಚಿತತೆಗಳು ಭಾರತವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಅಗತ್ಯವನ್ನು ಒತ್ತಿಹೇಳುತ್ತಿವೆ. ಸಾಂಪ್ರದಾಯಿಕ ಪದ್ದತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡರೆ ರೈತರು ಹೆಚ್ಚು ಪ್ರಯೋಜನ ಪಡೆಯಬಹುದು’ ಎಂದು ಶನಿವಾರ ಹೇಳಿದರು.
ಮೂಕಪ್ರಾಣಿಗಳ ನೋವನ್ನು ಅರ್ಥಮಾಡಿಕೊಂಡು ಅವುಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಕಲೆ ಪಶುವೈದ್ಯರಿಗೆ ತಿಳಿದಿದೆ. ದೇಸೀ ಜಾನುವಾರುಗಳ ಸಾಕಾಣಿಕೆ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳಲ್ಲಿ ಜನರ ವಿಶ್ವಾಸ ಹೆಚ್ಚುತ್ತಿದೆ ಎಂದು ಪ್ರತಿಪಾದಿಸಿದರು.
ಈ ವೇಳೆ, ಪಶುಸಂಗೋಪನಾ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಕೃಷಿಕರಿಗೆ ‘ಆದರ್ಶ ರೈತ’, ‘ಆದರ್ಶ ಗೋ ಸಂಗೋಪಕ’ ಮತ್ತು ಪಶುವೈದ್ಯಕೀಯ ಪದವೀಧರರಿಗೆ ‘ಅತ್ಯುತ್ತಮ ಪಶುವೈದ್ಯ’ ಮತ್ತು ‘ಆದರ್ಶ ಪ್ರಾಧ್ಯಾಪಕ’ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು ಮತ್ತು ಪಶುವೈದ್ಯಕೀಯ ವಿಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.