ADVERTISEMENT

75ನೇ ವಯಸ್ಸಿಗೆ ನಿವೃತ್ತಿಯಾಗಬೇಕು ಎಂದು ಹೇಳಿಲ್ಲ: ಮೋಹನ್ ಭಾಗವತ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 23:37 IST
Last Updated 28 ಆಗಸ್ಟ್ 2025, 23:37 IST
ಮೋಹನ್ ಭಾಗವತ್‌–ಪಿಟಿಐ ಚಿತ್ರ
ಮೋಹನ್ ಭಾಗವತ್‌–ಪಿಟಿಐ ಚಿತ್ರ   

ನವದೆಹಲಿ: ‘ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ಕೂಡ 75ನೇ ವಯಸ್ಸಿಗೆ ನಿವೃತ್ತಿಯಾಗಬೇಕು ಎಂಬುದಾಗಿ ನಾನು ಯಾರಿಗೂ ಹೇಳಿಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(‌ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. 

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ಇಲ್ಲಿನ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸರಣಿ ಉಪನ್ಯಾಸದ ಬಳಿಕ ಎರಡೂವರೆ ಗಂಟೆ ನಡೆದ ಪ್ರಶ್ನೋತ್ತರ ಗೋಷ್ಠಿಯಲ್ಲಿ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕೃತಕ ಬುದ್ಧಿಮತ್ತೆ, ಸುಂಕ, ಜಾತಿ, ಶಿಕ್ಷಣ, ದೇಶಭಕ್ತಿ, ರಾಷ್ಟ್ರಭಾಷೆ, ದೇಶ ವಿಭಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಶ್ಲೇಷಿಸಿದರು.

ಪ್ರಧಾನಿ ನರೇಂದ್ರ ಮೋದಿ, ಮೋಹನ್‌ ಭಾಗವತ್‌ ಅವರು ಸೆಪ್ಟೆಂಬರ್‌ ತಿಂಗಳಿನಲ್ಲಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ, ಇಬ್ಬರೂ ತಮ್ಮ ಹುದ್ದೆ ತೆರವುಗೊಳಿಸಲಿದ್ದಾರೆ ಎಂಬ ವದಂತಿಗಳು ಹರಡಿರುವ ಬೆನ್ನಲ್ಲೇ, ನಿವೃತ್ತಿ ಕುರಿತು ಭಾಗವತ್‌ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ನಾನು ಯಾವುದೇ ಸಂದರ್ಭದಲ್ಲಿಯೂ ನಿವೃತ್ತಿಯಾಗಲು ಸಿದ್ಧ. ಆದರೆ, ಸಂಘವು ಬಯಸುವವರೆಗೂ ನಾನು ಕೆಲಸ ಮಾಡುತ್ತೇನೆ‘ ಎಂದು ಅವರು ಹೇಳಿದರು.

ಮೂರು ಮಕ್ಕಳಿರಲಿ: ‘ಭಾರತದ ಪ್ರತಿ ಕುಟುಂಬವೂ ಮೂರು ಮಕ್ಕಳನ್ನು ಹೊಂದುವುದು ಅಗತ್ಯ. ದೇಶದಲ್ಲಿ 2.1ರ ಫಲವತ್ತತೆ ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸುತ್ತಿವೆ. ಜನಸಂಖ್ಯಾ ಕುಸಿತ ತಡೆಯಲು ಹಾಗೂ ಸ್ಥಿರತೆ ತರಲು ಪ್ರತಿ ಕುಟುಂಬ ಮೂರು ಮಕ್ಕಳನ್ನು ಹೊಂದುವುದು ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

ಅಕ್ರಮ ವಲಸೆಗೆ ಕಡಿವಾಣ: ‘ಮತಾಂತರ ಹಾಗೂ ಅಕ್ರಮ ವಲಸೆಯೇ ಜನಸಂಖ್ಯಾ ಸ್ವರೂಪದ ಅಸಮತೋಲನಕ್ಕೆ ಕಾರಣವಾಗಿದೆ. ಅಕ್ರಮ ವಲಸೆಯನ್ನು ಸರ್ಕಾರ ತಡೆಯಬೇಕಿದ್ದು, ಸಮಾಜವು ಈ ವಿಚಾರದಲ್ಲಿ ಕೈ ಜೋಡಿಸಬೇಕು’ ಎಂದು ಭಾಗವತ್‌ ಸಲಹೆ ನೀಡಿದರು.

‘ಧರ್ಮವು ವೈಯಕ್ತಿಕ ಆಯ್ಕೆಯಾಗಿದ್ದು, ಇದರಲ್ಲಿ ಯಾವುದೇ ಬಲವಂತ ಅಥವಾ ಆಮಿಷ ಇರಬಾರದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಅಕ್ರಮ ವಲಸಿಗರಿಗೆ ಯಾವುದೇ ಕಾರಣಕ್ಕೂ ಉದ್ಯೋಗ ನೀಡಬಾರದು. ಮುಸ್ಲಿಮರು ಸೇರಿದಂತೆ ನಮ್ಮವರಿಗೆ ಮಾತ್ರ ಉದ್ಯೋಗ ನೀಡಬೇಕು’ ಎಂದು ಹೇಳಿದರು.

ದಾಳಿ ಒಪ್ಪಲ್ಲ: ‘ಆತ್ಮವಿಶ್ವಾಸದ ಕೊರತೆಯಿಂದ ಹಿಂದೂಗಳು ಅಸುರಕ್ಷಿತರಾಗಿದ್ದಾರೆ. ಭಾರತದಲ್ಲಿ ಇಸ್ಲಾಮ್‌ಗೆ ಜಾಗ ಇದೆ. ಧಾರ್ಮಿಕತೆ ಸೇರಿದಂತೆ ಯಾವುದೇ ಮಾದರಿಯ ದಾಳಿ ಬಗ್ಗೆ ಆರ್‌ಎಸ್‌ಎಸ್‌ ನಂಬಿಕೆ ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾಗವತ್ ಹೇಳಿಕೆಯ ಪ್ರಮುಖಾಂಶಗಳು...

*ಕಾಶಿ–ಮಥುರಾ ಪುನಃಶ್ಚೇತನ ಅಭಿಯಾನವನ್ನು ಆರ್‌ಎಸ್‌ಎಸ್ ಬೆಂಬಲಿಸಲ್ಲ; ಸ್ವಯಂಸೇವಕರು ಭಾಗವಹಿಸುವುದಕ್ಕೆ ಅಭ್ಯಂತರವಿಲ್ಲ

*ಭಾರತೀಯರು ಮಾತೃಭಾಷೆ ರಾಜ್ಯಭಾಷೆ ಇಡೀ ದೇಶ ಸಂಪರ್ಕಸೇತುವಾದ ಮೂರು ಭಾಷೆಯನ್ನು ಕಲಿಯುವುದು ಅಗತ್ಯ

* ರಸ್ತೆಗಳು ಸ್ಥಳಗಳಿಗೆ ಆಕ್ರಮಣಕಾರರ ಹೆಸರನ್ನು ಇಡಬಾರದು. ಮುಸಲ್ಮಾನರ ಹೆಸರನ್ನು ಇಡಬಾರದು ಎಂದು ಹೇಳುತ್ತಿಲ್ಲ ಆಕ್ರಮಣಕಾರರ ಹೆಸರನ್ನು ಇಡುವುದು ಬೇಡ

* ಸಂವಿಧಾನಾತ್ಮಕವಾದ ಮೀಸಲಾತಿ ನೀತಿಗೆ ಆರ್‌ಎಸ್‌ಎಸ್‌ನ ಸಂಪೂರ್ಣ ಬೆಂಬಲವಿದೆ

* ಜಾತಿ ವ್ಯವಸ್ಥೆಯು ಒಂದು ಕಾಲದಲ್ಲಿ ಇತ್ತು ಈಗ ಪ್ರಸ್ತುತತೆ ಇಲ್ಲ ಇದು ಹಳೆಯದಾಗಿದ್ದು ಹೋಗಬೇಕಿದೆ

* ಶೋಷಣೆ ಮುಕ್ತ ಹಾಗೂ ಸಮಾನತೆಯ ವ್ಯವಸ್ಥೆಯ ಮೌಲ್ಯಮಾಪನದ ಅಗತ್ಯವಿದೆ

* ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಸ್ವೀಕರಾರ್ಹವಲ್ಲ

* ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ– ಆರ್‌ಎಸ್‌ಎಸ್‌ ಬೆಂಬಲಿಸಿದ ಏಕೈಕ ಚಳವಳಿ

* ಇಂಗ್ಲಿಷ್‌ ಸೇರಿದಂತೆ ಯಾವುದೇ ಭಾಷೆಯನ್ನು ಆರ್‌ಎಸ್‌ಎಸ್‌ ವಿರೋಧಿಸಲ್ಲ

* ಭಾರತ ಹಾಗೂ ಅದರ ಸಂಪ್ರದಾಯಗಳನ್ನು ಅರಿಯಲು ಸಂಸ್ಕೃತ ಭಾಷೆಯ ಅರಿವು ಅಗತ್ಯ ಸಂಸ್ಕೃತ ಕಡ್ಡಾಯಗೊಳಿಸುವ ನಿಲುವು ಒಪ್ಪಲ್ಲ

* ಮುಖ್ಯವಾಹಿನಿಯ ಶಿಕ್ಷಣದೊಂದಿಗೆ ಗುರುಕುಲದ ಶಿಕ್ಷಣವನ್ನು ಸಂಯೋಜಿಸಬೇಕು

* ಫಿನ್ಲೆಂಡ್‌ನ ಶಿಕ್ಷಣದ ಮಾದರಿ ನಮಗೂ ಅಗತ್ಯ

* ಆಧುನಿಕ ಶಿಕ್ಷಣ ತಂತ್ರಜ್ಞಾನ ವಿರೋಧಿಸಲ್ಲ ಇದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಜನರ ಕೈಯಲ್ಲಿದೆ

*ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಸರಿಯಾದ ದಿಕ್ಕಿನಲ್ಲಿ ಸರಿಯಾದ ಹೆಜ್ಜೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.