ನವದೆಹಲಿ: ಕೋವಿಡ್ 19ರ ವಿರುದ್ಧ ಅಭಿವೃದ್ಧಿಪಡಿಸಿರುವ ಲಸಿಕೆ ಸ್ಪುಟ್ನಿಕ್–5 ತಯಾರಿಕೆಗೆ ಭಾರತದ ಜತೆಗೆ ಸಹಭಾಗಿತ್ವವನ್ನು ಎದುರು ನೋಡುತ್ತಿರುವುದಾಗಿ ರಷ್ಯಾದ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್ ಫಂಡ್‌ನ (ಆರ್‌ಡಿಐಎಫ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರಿಲ್ ಡಿಮಿಟ್ರಿವ್ ಗುರುವಾರ ಹೇಳಿದ್ದಾರೆ.
ಕೋವಿಡ್ ವಿರುದ್ಧ ತಮ್ಮ ದೇಶವು ಮೊದಲ ಲಸಿಕೆ ಅಭಿವೃದ್ಧಿಪಡಿಸಿದ್ದು, ಅದು ಪರಿಣಾಮಕಾರಿಯಾಗಿದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಘೋಷಿಸಿದ್ದರು.
ಗಮೆಲಿಯ ರಿಸರ್ಚ್ ಇನ್ಸ್‌ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್ ಮೈಕ್ರೊಬಯಾಲಜಿ ಹಾಗೂ ಆರ್‌ಡಿಐಎಫ್ ಜತೆಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ. ಈ ಲಸಿಕೆಯ ಮೂರನೇ ಹಂತದ ಅಥವಾ ಹೆಚ್ಚು ವ್ಯಾಪಕವಾದ ಕ್ಲಿನಿಕಲ್ ಟ್ರಯಲ್ (ಮನುಷ್ಯರ ಮೇಲೆ ಪ್ರಯೋಗ) ನಡೆದಿಲ್ಲ.
ಲ್ಯಾಟಿನ್ ಅಮೆರಿಕ, ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ಹಲವು ದೇಶಗಳು ಲಸಿಕೆ ತಯಾರಿಕೆಯಲ್ಲಿ ಕೈಜೋಡಿಸಲು ಮುಂದೆ ಬಂದಿದೆ ಎಂದು ಡಿಮಿಟ್ರಿವ್ ಹೇಳಿದ್ದಾರೆ.
‘ಲಸಿಕೆಯ ತಯಾರಿಕೆಯು ಬಹಳ ಪ್ರಮುಖ ವಿಚಾರ. ಭಾರತದ ಜತೆಗೆ ಸಹಭಾಗಿತ್ವ ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಈ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ನಾವು ನಂಬಿದ್ದೇವೆ. ಈಗ ಇರುವ ಬೇಡಿಕೆಯನ್ನು ಪೂರೈಸಲು ಇಂತಹ ಸಹಭಾಗಿತ್ವ ಅತ್ಯಂತ ಅಗತ್ಯ’ ಎಂದು ಅವರು ವಿವರಿಸಿದ್ದಾರೆ.
‘ರಷ್ಯಾ ಮಾತ್ರವಲ್ಲದೆ, ಅರಬ್ ಸಂಯುಕ್ತ ಸಂಸ್ಥಾನ, ಸೌದಿ ಅರೇಬಿಯಾ, ಬ್ರೆಜಿಲ್ ಮತ್ತು ಭಾರತದಲ್ಲಿ ಕೂಡ ಕ್ಲಿನಿಕಲ್ ಟ್ರಯಲ್ ನಡೆಸಲು ಬಯಸಿದ್ದೇವೆ. ಐದಕ್ಕೂ ಹೆಚ್ಚು ದೇಶಗಳಲ್ಲಿ ಲಸಿಕೆ ತಯಾರಿಸುವ ಗುರಿ ಇದೆ. ಏಷ್ಯಾ, ಲ್ಯಾಟಿನ್ ಅಮೆರಿಕ, ಇಟಲಿ ಮತ್ತು ಜಗತ್ತಿನ ವಿವಿಧ ಭಾಗಗಳಿಂದ ಲಸಿಕೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ’ ಎಂದು ಅವರು ಡಿಮಿಟ್ರಿವ್ ಹೇಳಿದ್ದಾರೆ.
ಈ ಲಸಿಕೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ ಎಂದು ಗಮೆಲಿಯ ಸಂಸ್ಥೆಯ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ರಷ್ಯಾದ ಲಸಿಕೆ ಪ್ರಯೋಗಕ್ಕೆಭಾರತವೂ ಸ್ವಯಂಸೇವಕರನ್ನು ಒದಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.