ADVERTISEMENT

ಪಾಕ್‌ ದಾಳಿ: ಎಸ್‌–400, ಆಕಾಶ್ ಕ್ಷಿಪಣಿಗಳಿಂದ ಪ್ರತ್ಯುತ್ತರ

ಪಿಟಿಐ
Published 9 ಮೇ 2025, 23:30 IST
Last Updated 9 ಮೇ 2025, 23:30 IST
ಎಸ್-400 ಟ್ರಯಂಫ್‌ ಕ್ಷಿಪಣಿ ವ್ಯವಸ್ಥೆ
ಎಸ್-400 ಟ್ರಯಂಫ್‌ ಕ್ಷಿಪಣಿ ವ್ಯವಸ್ಥೆ   

ನವದೆಹಲಿ: ಪಾಕಿಸ್ತಾನವು ಡ್ರೋನ್‌ ಹಾಗೂ ಕ್ಷಿಪಣಿಗಳಿಂದ ನಡೆಸುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಭಾರತೀಯ ಪಡೆಗಳು ಅತ್ಯಾಧುನಿಕ ಎಸ್‌–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ, ಬರಾಕ್–8 ಹಾಗೂ ಆಕಾಶ್ ಕ್ಷಿಪಣಿಗಳನ್ನು ಬಳಸುತ್ತಿವೆ ಎಂದು ಉನ್ನತ ಮೂಲಗಳು ಶುಕ್ರವಾರ ಹೇಳಿವೆ.

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತ್ಯುತ್ತರ ನೀಡಲು ಭಾರತವು ಮೇ 7ರಂದು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನ ಪಡೆಗಳು ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿಗಳಿಂದ ದಾಳಿ ನಡೆಸುವ ಮೂಲಕ ಉದ್ವಿಗ್ನತೆ ಸೃಷ್ಟಿಗೆ ಯತ್ನಿಸಿದವು. ಆದರೆ, ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಬಳಸುವ ಮೂಲಕ ಭಾರತವು ಶತ್ರು ಪಾಳಯದ ದಾಳಿಯನ್ನು ಸಮರ್ಥವಾಗಿ ತಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ, ಡ್ರೋನ್‌ ನಿರೋಧಕ ತಂತ್ರಜ್ಞಾನಗಳನ್ನು ಒಳಗೊಂಡ ಸಾಧನಗಳನ್ನು ಕೂಡ ಭಾರತದ ಪಡೆಗಳು ಬಳಸಿವೆ.

ADVERTISEMENT

ಮೇ 7–8ರ ರಾತ್ರಿ ಆವಂತಿಪುರ, ಶ್ರೀನಗರ, ಜಮ್ಮು, ಪಠಾಣಕೋಟ್, ಅಮೃತಸರ, ಕಪೂರ್ತಲಾ, ಜಲಂಧರ, ಲುಧಿಯಾನ, ಆದಮ್‌ಪುರ, ಬಠಿಂಡಾ, ಚಂಡೀಗಢ, ನಾಲ್, ಫಲೋಡಿ, ಭುಜ್‌ ಮತ್ತಿತರ ಕಡೆಗಳಲ್ಲಿನ ಮಿಲಿಟರಿ ನೆಲಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್‌ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿತ್ತು.

ನಿರ್ದಿಷ್ಟ ಹಾಗೂ ಕ್ಷಿಪ್ರ ಪ್ರತ್ಯುತ್ತರ ನೀಡುವ ಮೂಲಕ, ಪಾಕಿಸ್ತಾನದ ಈ ಎಲ್ಲ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿದೆ. ಪಾಕಿಸ್ತಾನ ಉಡಾಯಿಸಿದ ಯಾವ ಡ್ರೋನ್‌/ಕ್ಷಿಪಣಿಯೂ ನಿರ್ದೇಶಿತ ತನ್ನ ಗುರಿ ತಲುಪಿಲ್ಲ ಎಂದೂ ಮೂಲಗಳು ಹೇಳಿವೆ.  

ಉರಿಯಲ್ಲಿ ನಡೆದ ನಿರ್ದಿಷ್ಟ ದಾಳಿ ಹಾಗೂ ಬಾಲಾಕೋಟ್‌ ಮೇಲಿನ ವೈಮಾನಿಕ ದಾಳಿ ನಂತರ, ದೇಶದ ವಾಯುಪ್ರದೇಶ ರಕ್ಷಣೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅತ್ಯಾಧುನಿಕ ಕ್ಷಿಪಣಿ/ಡ್ರೋನ್‌ ನಿರೋಧಕ ವ್ಯವಸ್ಥೆಗಳನ್ನು ಖರೀದಿಸಲಾಗಿದೆ ಎಂದು ಇವೇ ಮೂಲಗಳು ಹೇಳಿವೆ.

‘ಭಾರತೀಯ ಸೇನೆಯು ಇಸ್ರೇಲ್‌ ನಿರ್ಮಿತ, ನೆಲದಿಂದ ಆಕಾಶಕ್ಕೆ ಚಿಮ್ಮುವ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಗಳು ಹಾಗೂ ದೇಶೀಯವಾಗಿ ನಿರ್ಮಿಸಲಾದ ಆಕಾಶ್‌ ಕ್ಷಿಪಣಿ ವ್ಯವಸ್ಥೆಗಳನ್ನು ಹೊಂದಿದೆ. ಇವುಗಳಲ್ಲದೇ, ಕಡಿಮೆ ವ್ಯಾಪ್ತಿಯಲ್ಲಿನ ಗುರಿ ನಾಶ ಮಾಡಬಲ್ಲ ರಕ್ಷಣಾ ವ್ಯವಸ್ಥೆ(ವಿಶಾರ್ಡ್ಸ್‌) ‘ಇಗ್ಲಾ–ಎಸ್‌’, ‘ಕ್ಯೂಆರ್‌ಎಸ್‌ಎಎಂ’ ಕ್ಷಿಪಣಿಗಳನ್ನು ಹೊಂದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಕಾಶ್‌ ಕ್ಷಿಪಣಿ

‘ಸೇನೆ ಹಾಗೂ ವಾಯುಪಡೆ, ಆಕಾಶ್‌ ಕ್ಷಿಪಣಿಗಳನ್ನು ಹೊಂದಿವೆ. ಪಾಕಿಸ್ತಾನಕ್ಕೆ ಹೊಂದಿಕೊಂಡ ಗಡಿ ಉದ್ದಕ್ಕೂ ಈ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜನೆ ಮಾಡಲಾಗಿದೆ’ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸುವುದಕ್ಕಾಗಿ ಜಾಮರ್‌ಗಳನ್ನು ಕೂಡ ಬಳಸಲಾಗುತ್ತಿದೆ ಎಂದಿದ್ದಾರೆ.

ಬರಾಕ್‌–8 ಕ್ಷಿಪಣಿ

ಎಸ್‌–400 ಕ್ಷಿಪಣಿ ವ್ಯವಸ್ಥೆ

ರಷ್ಯಾ ಅಭಿವೃದ್ಧಿಪಡಿಸಿರುವ ಎಸ್‌–400 ಕ್ಷಿಪಣಿ ವ್ಯವಸ್ಥೆಯು ಶತ್ರು ಪಾಳಯ ನಡೆಸುವ ವೈಮಾನಿಕ ದಾಳಿ ತಡೆಯುವ ಪ್ರಮುಖ ಆಯುಧವಾಗಿ ಹೊರಹೊಮ್ಮಿದೆ. ವಿಶಿಷ್ಟ ರೇಡಾರ್‌ ವ್ಯವಸ್ಥೆಯ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುವ ಈ ಕ್ಷಿಪಣಿಯು 600 ಕಿ.ಮೀ ದೂರದ ವರೆಗಿನ ಗುರಿಯನ್ನು ನಾಶ ಮಾಡಬಲ್ಲದು.

ಎದುರಾಗುವ ಅಪಾಯದ ಸ್ವರೂಪವನ್ನು ಆಧರಿಸಿ 120 ಕಿ.ಮೀ. 200 ಕಿ.ಮೀ. 250 ಕಿ.ಮೀ. ಹಾಗೂ 380 ಕಿ.ಮೀ. ದೂರದ ವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯದ ಕ್ಷಿಪಣಿಗಳನ್ನು ಈ ವ್ಯವಸ್ಥೆ ಹೊಂದಿದೆ. ಬರಾಕ್‌–8 ಕ್ಷಿಪಣಿ ವಾಯು ಭೂಮೇಲ್ಮೈ ಹಾಗೂ ಸಮುದ್ರದ ಮೂಲಕ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. 

ಅತ್ಯಾಧುನಿಕ ಡಿಜಿಟಲ್ ರೇಡಾರ್ ಲಾಂಚರ್‌ಗಳು ಕಮಾಂಡ್ ಮತ್ತು ಕಂಟ್ರೋಲಿಂಗ್ ವ್ಯವಸ್ಥೆ ಡಾಟಾ ಲಿಂಕ್ ಮತ್ತು ವಿಶಾಲ ವ್ಯಾಪ್ತಿಯ ಸಂಪರ್ಕ ವ್ಯವಸ್ಥೆ ಹೊಂದಿರುವ ಈ ಕ್ಷಿಪಣಿ ಯಾವುದೇ ವಾತಾವರಣದಲ್ಲಿ ಹಗಲು ರಾತ್ರಿ ಎನ್ನದೇ ಏಕಕಾಲದಲ್ಲಿ ವಿವಿಧ ಕಡೆ ನಿಗಾ ವಹಿಸುವ ಸಾಮರ್ಥ್ಯವಿದೆ ಆಕಾಶ್‌ ಕ್ಷಿಪಣಿ ಹೊಸ ತಲೆಮಾರಿನ ಆಕಾಶ್ ಭೂಮೇಲ್ಮೈಯಿಂದ ಆಕಾಶದತ್ತ ದಾಳಿ ಮಾಡುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಕಡಿಮೆ ಎತ್ತರದಲ್ಲಿ ಅತಿ ವೇಗದಿಂದ ಹಾರಾಟ ನಡೆಸುವ ಮಾನವರಹಿತ ವೈಮಾನಿಕ ಗುರಿಯನ್ನು(ಯುಎವಿ) ಅತ್ಯಂತ ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.