ADVERTISEMENT

ಶಬರಿಗಿರಿ: ನಾರಿ ಪ್ರವೇಶಕ್ಕೆ ಕಿರಿಕಿರಿ; ಸುಪ್ರೀಂ ತೀರ್ಪು ಮರುಪರಿಶೀಲನೆಗೆ ಅರ್ಜಿ

ಶಬರಿಗಿರಿ: ಸುಪ್ರೀಂ ಕೋರ್ಟ್‌ ತೀರ್ಪು ಮರುಪರಿಶೀಲನೆಗೆ ಮೂರು ಅರ್ಜಿ

ಪಿಟಿಐ
Published 8 ಅಕ್ಟೋಬರ್ 2018, 20:15 IST
Last Updated 8 ಅಕ್ಟೋಬರ್ 2018, 20:15 IST
ಶಬರಿಮಲೆ ದೇವಾಲಯ
ಶಬರಿಮಲೆ ದೇವಾಲಯ   

ನವದೆಹಲಿ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್‌ನ ತೀರ್ಪು ಕೇರಳದಲ್ಲಿ ಸಾಮಾಜಿಕ ಮತ್ತು ರಾಜಕೀಯ ಹೊಯ್ದಾಟಕ್ಕೆ ಕಾರಣವಾಗಿದೆ.ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮೂರು ಪುನರ್‌ವಿಮರ್ಶೆ ಅರ್ಜಿಗಳು ಸಲ್ಲಿಕೆಯಾಗಿವೆ. ತೀರ್ಪು ಜಾರಿ ತಡೆಗೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಂಡಿದೆ.

ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ ಅಧ್ಯಕ್ಷರಾಗಿರುವ ಶೈಲಜಾ ವಿಜಯನ್‌ ಅವರು ಸುಪ್ರೀಂ ಕೋರ್ಟ್‌ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಸೆ. 28ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸಮರ್ಥನೀಯವೂ ಅಲ್ಲ, ತಾರ್ಕಿಕವೂ ಅಲ್ಲ ಎಂದಿದ್ದಾರೆ.

ಕೇರಳದ ಪ್ರಭಾವಿ ನಾಯರ್‌ ಸಮುದಾಯದ ನಾಯರ್‌ ಸೇವಾ ಸಂಸ್ಥೆ ಕೂಡ ತೀರ್ಪು ಮರುಪರಿಶೀಲಿಸು
ವಂತೆ ಅರ್ಜಿ ಸಲ್ಲಿಸಿದೆ. ಈ ತೀರ್ಪು ಜನರ ಭಾವನೆಗಳನ್ನು ಬಿಂಬಿಸುತ್ತಿಲ್ಲ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ. ಚೇತನಾ ಕಾನ್‌ಸಿಯೆನ್ಸ್‌ ಆಫ್‌ ವಿಮೆನ್‌ ಎಂಬ ಎನ್‌ಜಿಒ ಮತ್ತೊಂದು ಅರ್ಜಿ ಸಲ್ಲಿಸಿದೆ.

ADVERTISEMENT

ಅಯ್ಯಪ್ಪನ ಲಕ್ಷಾಂತರ ಭಕ್ತರ ಮೂಲಭೂತ ಹಕ್ಕಿಗೆ ಸುಪ್ರೀಂ ಕೋರ್ಟ್‌ನ ತೀರ್ಪು ಧಕ್ಕೆ ತಂದಿದೆ ಎಂದು ಶೈಲಜಾ ಅವರು ವಾದಿಸಿದ್ದಾರೆ.

‘ಸಮುದಾಯದ ವಿವೇಕಕ್ಕೆ ಅತ್ಯಂತ ಶ್ರೇಷ್ಠ ನ್ಯಾಯಪಂಡಿತರು ಕೂಡ ಸಾಟಿಯಾಗುವುದು ಸಾಧ್ಯವಿಲ್ಲ. ದೇಶದ ಅತ್ಯುನ್ನತ ನ್ಯಾಯಾಲಯ ಸೇರಿ ಯಾವುದೇ ನ್ಯಾಯಾಲಯದ ತೀರ್ಪು ಜನರ ಧ್ವನಿಗೆ ಸಮಾನ ಆಗಲಾರದು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮರುಪರಿಶೀಲನೆ ಅರ್ಜಿ ಸಲ್ಲಿಸದಿರುವ ಕೇರಳ ಸರ್ಕಾರದ ನಿರ್ಧಾರದ ಬಗ್ಗೆ ರಾಜ್ಯದಾದ್ಯಂತ ಪ್ರತಿ
ಭಟನೆ ನಡೆಯುತ್ತಿದೆ.

ಒಗ್ಗಟ್ಟು ಒಡೆಯುವ ಯತ್ನ: ಪಿಣರಾಯಿ

ಕೇರಳದ ಒಗ್ಗಟ್ಟು ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಹಾಳುಗೆಡವಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ.

ವಿವಿಧ ಧರ್ಮಗಳು ಮತ್ತು ಬೇರೆ ಬೇರೆ ಪ್ರಾರ್ಥನಾ ಸ್ಥಳಗಳ ಪದ್ಧತಿಗಳು ಮತ್ತು ಪರಂಪರೆಯನ್ನು ರಕ್ಷಿಸಲು ತಮ್ಮ ಸರ್ಕಾರವು ಬದ್ಧವಾಗಿದೆ. ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಲು ಯತ್ನಿಸುತ್ತಿರುವ ರಾಜಕೀಯಪ್ರೇರಿತ ಪ್ರಯತ್ನಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಯಾತ್ರೆ

ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೆ ತರಲು ಕೇರಳ ಸರ್ಕಾರ ಆತುರಾತುರವಾಗಿ ಕೈಗೊಂಡ ಕ್ರಮಗಳನ್ನು ಖಂಡಿಸಿ ಶಬರಿಮಲೆ ಉಳಿಸಿ ಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಪಂದಳದಿಂದ ತಿರುವನಂತಪುರದವರೆಗೆ ನಡೆಯಲಿರುವ ಐದು ದಿನಗಳ ಈ ಯಾತ್ರೆ ಬುಧವಾರ ಆರಂಭವಾಗಲಿದೆ.

ಪ್ರಧಾನಿಗೆ ಪತ್ರ

ಶಬರಿಮಲೆಯನ್ನು ನಾಸ್ತಿಕರ ಹಿಡಿತದಿಂದ ರಕ್ಷಿಸಬೇಕು. ಇಲ್ಲಿನ ಸಂಪತ್ತು ಮತ್ತು ಆದಾಯವನ್ನು ಕೊಳ್ಳೆ ಹೊಡೆಯುವುದೇ ಈ ಜನರ ಉದ್ದೇಶ. ಹಾಗಾಗಿ ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿಯ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಪಿ.ಪಿ. ಮುಕುಂದನ್‌ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಬಾಗಿಲಲ್ಲಿ ಮಲಗಿ ಪ್ರತಿರೋಧ

ದೇವಾಲಯದ ಹೆಬ್ಬಾಗಿಲಿ ನಲ್ಲಿ ನೂರಾರು ಜನರುಮಲಗಿ ಮಹಿಳೆಯರ ಪ್ರವೇಶ ತಡೆಯ ಲಾಗುವುದು ಎಂದು ಸ್ಥಳೀಯ ಸಂಘಟನೆಯೊಂದು ಹೇಳಿದೆ.

* ರಾಜ್ಯದಲ್ಲಿ ಅಧಿಕಾರದಲ್ಲಿರುವ ನಾಸ್ತಿಕ ತತ್ವ ಆಧರಿತ ಸಿಪಿಎಂ ಶಬರಿಮಲೆಯನ್ನು ನಿರ್ನಾಮ ಮಾಡಲು 50 ವರ್ಷಗಳಿಂದ ಯತ್ನಿಸುತ್ತಿದೆ. ಈ ಯತ್ನ ಯಶಸ್ವಿಯಾಗದು

-ಪಿ.ಎಸ್‌. ಶ್ರೀಧರನ್‌ ಪಿಳ್ಳೆ,ಬಿಜೆಪಿ ಕೇರಳ ಘಟಕದ ಅಧ್ಯಕ್ಷ

* ಶಬರಿಮಲೆ ವಿಚಾರದಲ್ಲಿ ರಾಜ್ಯದ ನಿಲುವಿನ ಬಗ್ಗೆ ತಪ್ಪುಗ್ರಹಿಕೆಗಳಿದ್ದರೆ, ಅನುಮಾನ ಗಳಿದ್ದರೆ ಸಂಬಂಧಪಟ್ಟ ಯಾರ ಜತೆ ಗಾದರೂ ಮಾತುಕತೆ ನಡೆಸಲು ಸಿದ್ಧ

-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.