ADVERTISEMENT

ಅಯ್ಯಪ್ಪ ಭಕ್ತರ ಸೆಳೆಯಲು ಸಿನಿಮಾ ನಟರ ಜಾಹೀರಾತು!

ಶಬರಿಮಲೆ: ಕರಗುತ್ತಿರುವ ಯಾತ್ರಿಕರ ದಂಡು

ಪಿಟಿಐ
Published 2 ಡಿಸೆಂಬರ್ 2018, 20:06 IST
Last Updated 2 ಡಿಸೆಂಬರ್ 2018, 20:06 IST
   

ತಿರುವನಂತಪುರ: ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸುವ ಸಂಬಂಧ ಭುಗಿಲೆದ್ದ ಪ್ರತಿಭಟನೆ ಮತ್ತು ಅಹಿತಕರ ಘಟನೆಗಳಿಂದ ಶಬರಿಮಲೆಗೆ ಬರುವಭಕ್ತರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ.

ಮಕರ ಜ್ಯೋತಿ ದರ್ಶನ ಮತ್ತು ವಾರ್ಷಿಕ ಪೂಜೆಗಾಗಿ ದೇವಸ್ಥಾನದ ಬಾಗಿಲು ತೆರೆದು ಎರಡು ವಾರಗಳಾದರೂ ಭಕ್ತರ ಸಂಖ್ಯೆ ಏರುತ್ತಿಲ್ಲ. ಇದು ದೇವಸ್ತಾನದ ಆಡಳಿತ ಉಸ್ತುವಾರಿ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯನ್ನು (ಟಿಡಿಬಿ) ಚಿಂತೆಗೀಡು ಮಾಡಿದೆ.

ಶಬರಿಮಲೆಗೆ ಭಕ್ತರನ್ನು ಸೆಳೆಯಲು ಸಿನಿಮಾ ನಟ, ನಟಿಯರನ್ನು ಬಳಸಿಕೊಂಡು ಜಾಹೀರಾತು ನೀಡಲು ಟಿಡಿಬಿ ಮುಂದಾಗಿದೆ.

ADVERTISEMENT

ಮಂಡಲ ಪೂಜೆ ಮತ್ತು ಮಕರವಿಳಕ್ಕು (ಮಕರ ಜ್ಯೋತಿ) ಈ ಎರಡು ತಿಂಗಳ ಅವಧಿಯಲ್ಲಿ ಶಬರಿಮಲೆ ಮತ್ತು ಅಯ್ಯಪ್ಪ ದೇವಸ್ಥಾನ ಆವರಣ ಕಾಲಿಡಲು ಜಾಗವಿಲ್ಲದಷ್ಟು ಭಕ್ತರಿಂದ ತುಂಬಿರುತ್ತಿತ್ತು.

ಕಳೆದ ತಿಂಗಳು ಶಬರಿಮಲೆ ಮತ್ತು ಪಂಪಾದಲ್ಲಿ ನಡೆದ ಗಲಾಟೆ, ಸಂಘರ್ಷಗಳಿಂದ ಹೊರ ರಾಜ್ಯಗಳಿಂದ ಬರುವ ಭಕ್ತರಲ್ಲಿ ಇನ್ನೂ ಆತಂಕ ಮನೆ ಮಾಡಿದೆ. ಇದರಿಂದಾಗಿ ಅವರು ಇತ್ತ ಹೆಜ್ಜೆ ಹಾಕಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ಶಬರಿಮಲೆಗೆ ಬರುವವರಲ್ಲಿ ನೆರೆಯ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಭಕ್ತರ ಸಂಖ್ಯೆಯೇ
ಹೆಚ್ಚು.

‘ಶಬರಿಮಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ ಎಂಬುದನ್ನು ಹೊರರಾಜ್ಯಗಳ ಭಕ್ತರಿಗೆ ಮನವರಿಕೆ ಮಾಡಬೇಕಾಗಿದೆ. ಭಕ್ತರು ಅಂಜಿಕೆ, ಅಳಕು ಇಲ್ಲದೆ ಇಲ್ಲಿಗೆ ಬರಬಹುದು ಎಂದು ಜನಪ್ರಿಯ ನಟ, ನಟಿಯರಿಂದ ಜಾಹೀರಾತು ನೀಡಿದರೆ ಜನರಿಗೆ ಬೇಗ ತಲುಪುತ್ತದೆ. ಸೋಮವಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೆಸರು ಹೇಳಲು ಇಚ್ಛಿಸದ ಟಿಡಿಬಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ನಿರ್ಬಂಧಗಳ ಸಡಿಲ..

ಪೊಲೀಸರು ಒಂದೊಂದಾಗಿ ನಿರ್ಬಂಧಗಳನ್ನು ಸಡಿಲಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಶಬರಿಮಲೆಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ ಎಂದು ಟಿಡಿಬಿ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶುಕ್ರವಾರ 61 ಸಾವಿರ ಮತ್ತು ಶನಿವಾರ 75 ಸಾವಿರ ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆರಂಭದಲ್ಲಿ ಕುಸಿದಿದ್ದ ಅಪ್ಪಂ ಮತ್ತು ಪ್ರಸಾದ ಮಾರಾಟ ಚೇತರಿಸಿಕೊಂಡಿದೆ ಎಂದು ಸದಸ್ಯರು ಹೇಳಿದ್ದಾರೆ.

ವಿವಾದ ಜೀವಂತವಾಗಿಡುವ ಯತ್ನ

ಶಬರಿಮಲೆ ವಿವಾದವನ್ನು ಜೀವಂತವಾಗಿಡಲು ಮತ್ತು ಪ್ರತಿಭಟನೆಯನ್ನು ತೀವ್ರಗೊಳಿಸಲು ಮಿಜೋರಾಂ ರಾಜ್ಯಪಾಲ ಕೆ. ರಾಜಶೇಖರನ್‌ ಅವರನ್ನು ಕೇರಳದ ಸಕ್ರಿಯ ರಾಜಕೀಯಕ್ಕೆ ಮರಳಿ ತರಲು ಆರ್‌ಎಸ್‌ಎಸ್‌ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ರಾಜಶೇಖರನ್‌ ಅವರನ್ನು ಆದಷ್ಟೂ ಬೇಗ ರಾಜ್ಯಪಾಲ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ವರಿಷ್ಠರಿಗೆ ಆರ್‌ಎಸ್‌ಎಸ್‌ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಾಜಶೇಖರನ್‌ ಅವರು ಮಿಜೋರಾಂ ರಾಜ್ಯಪಾಲರಾಗಿ ತೆರಳುವ ಮೊದಲು ಕೇರಳ ಬಿಜೆಪಿ ಘಟಕದ ಮುಖ್ಯಸ್ಥರಾಗಿದ್ದರು. ಕೇರಳ ಬಿಜೆಪಿ ಒಳಜಗಳದಿಂದ ಶಬರಿಮಲೆ ವಿವಾದವನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲು ಮತ್ತು ಅದರಿಂದ ನಿರೀಕ್ಷಿತ ಲಾಭ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಆರ್‌ಎಸ್‌ಎಸ್‌ ಅಸಮಧಾನಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಾಗಬೇಕಾದರೆ ಶಬರಿಮಲೆ ವಿವಾದವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದಕ್ಕೆ ರಾಜಶೇಖರನ್‌ ಸೂಕ್ತ ವ್ಯಕ್ತಿ ಎನ್ನುವುದು ಸಂಘದ ಚಿಂತನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.